ವಾಜಪೇಯಿ ಭವ್ಯ ಭಾರತದ ಶಕ್ತಿ: ಕೇಂದ್ರ ಸಚಿವ ಅನಂತ್‌ಕುಮಾರ್

Update: 2018-08-20 13:28 GMT

ಮಂಗಳೂರು, ಆ. 20: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಭಾರತದ ಸ್ವಾತಂತ್ರ್ಯೋತ್ತರ ರಾಜಕಾರಣದಲ್ಲಿ ಸದಾ ಹಸಿರಾಗಿರುವ ಮಹಾನ್‌ಚೇತನ. ಭವ್ಯ ಭಾರತದ ಮಹಾನ್ ಶಕ್ತಿಯಾಗಿದ್ದರು ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತ್‌ಕುಮಾರ್ ಹೇಳಿದ್ದಾರೆ.

ದಿಲ್ಲಿ ಕರ್ನಾಟಕ ಸಂಘದಲ್ಲಿ ರವಿವಾರ ಜರುಗಿದ ಅಜಾತಶತ್ರು ಭಾರತರತ್ನ ವಾಜಪೇಯಿ ಅವರಿಗೆ ಸಂಗೀತ ನಮನ ಕಾರ್ಯಕ್ರಮದಲ್ಲಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತಾನಾಡಿದರು.

ಅಟಲ್ ಸಂಪುಟದಲ್ಲಿ ಸಹೋದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ತನಗೆ ಸಿಕ್ಕಿತ್ತು. ಕರ್ನಾಟಕದೊಂದಿಗೆ ವಾಜಪೇಯಿ ಅವರಿಗೆ ಅವಿನಾನುಭವ ಸಂಬಂಧ ಇತ್ತು. ಕಾವೇರಿ ವಿವಾದ ತಾರಕಕ್ಕೇರಿದ್ದ ಸಂದರ್ಭದಲ್ಲಿ ಅಮೆರಿಕಕ್ಕೆ ಹೊರಟು ನಿಂತಿದ್ದ ವಾಜಪೇಯಿ ತಮ್ಮ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ಮಧ್ಯೆಯೂ ಕರ್ನಾಟಕ, ತಮಿಳುನಾಡುಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ರಾಜ್ಯಕ್ಕೆ ನ್ಯಾಯ ಒದಗಿಸಿದ್ದರು ಎಂದು ಅನಂತ್‌ಕುಮಾರ್ ತಿಳಿಸಿದರು.

ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಕೇವಲ ಒಬ್ಬ ರಾಜಕಾರಣಿಯಲ್ಲ ಅಥವಾ ಕೇವಲ ಪ್ರಧಾನಿ ಯಾಗಿದ್ದರೂ ಎನ್ನುವುದಕ್ಕಿಂತ ಅವರೊಬ್ಬ ಸಾಹಿತಿ, ಪರ್ತಕರ್ತ, ಕವಿ ಮತ್ತುನಾಡು-ನುಡಿ ಸಂಸ್ಕತಿಯ ಪ್ರೇಮಿಯಾಗಿದ್ದರು ಎಂದರು.

ಧಾರವಾಡದಿಂದ ಆಗಮಿಸಿದ ಮೋಹಸಿನ್ ಖಾನ್ ಮತ್ತು ಸಂಗಡಿಗರಿಂದ ಸಿತಾರ್‌ವಾದನ ಕಾರ್ಯಕ್ರಮ ನಡೆಯಿತು.ಕಾರ್ಯಕಾರಿ ಸಮಿತಿ ಸದಸ್ಯೆ  ಪೂಜಾ ಪಿ.ರಾವ್‌ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News