ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿ: ಅಂತಾರಾಷ್ಟ್ರೀಯ ಸಮುದಾಯಕ್ಕೆ ಪೋಪ್ ಫ್ರಾನ್ಸಿಸ್ ಕರೆ

Update: 2018-08-20 14:50 GMT

ವ್ಯಾಟಿಕನ್ ಸಿಟಿ, ಆ. 20: ಕೇರಳದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವಂತೆ ಪೋಪ್ ಫ್ರಾನ್ಸಿಸ್ ರವಿವಾರ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಪೋಪ್ ಫ್ರಾನ್ಸಿಸ್ ಇಲ್ಲಿನ ಸೇಂಟ್ ಪೀಟರ್ಸ್ ಚೌಕದಲ್ಲಿ ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಪ್ರಾರ್ಥನೆ ಸಲ್ಲಿಸಿದರು ಎಂದು ‘ವ್ಯಾಟಿಕನ್ ನ್ಯೂಸ್’ ವರದಿ ಮಾಡಿದೆ.

‘‘ಕೇರಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ಅಲ್ಲಿನ ನಿವಾಸಿಗಳು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲಿ ಭಾರೀ ಪ್ರಮಾಣದಲ್ಲಿ ಮಾನವ ಪ್ರಾಣಗಳು ನಾಶವಾಗಿವೆ. ತುಂಬಾ ಜನರು ನಾಪತ್ತೆಯಾಗಿದ್ದಾರೆ ಹಾಗೂ ಭಾರೀ ಸಂಖ್ಯೆಯಲ್ಲಿ ಜನರು ನಿರ್ವಸಿತರಾಗಿದ್ದಾರೆ. ಮನೆಗಳು ಮತ್ತು ಬೆಳೆಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ’’ ಎಂದು ಪೋಪ್ ಹೇಳಿದ್ದಾರೆ.

‘‘ಕೇರಳದ ಸಹೋದರ ಸಹೋದರಿಯರನ್ನು ನಾವು ಬೆಂಬಲಿಸಬೇಕಾಗಿದೆ. ಅವರಿಗೆ ಅಂತಾರಾಷ್ಟ್ರೀಯ ಸಮುದಾಯದ ಸದೃಢ ಬೆಂಬಲ ಬೇಕಾಗಿದೆ’’ ಎಂದರು.

 ಕೇರಳದ ಕೆಥೋಲಿಕ್ ಚರ್ಚ್‌ನೊಂದಿಗೆ ವ್ಯಾಟಿಕನ್ ಹೊಂದಿರುವ ಆತ್ಮೀಯ ಸಂಬಂಧವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಕೇರಳ ಕೆಥೋಲಿಕ್ ಚರ್ಚ್ ಕೇರಳ ಪ್ರವಾಹ ಸಂತ್ರಸ್ತರಿಗೆ ಪರಿಹಾರ ದೊರಕಿಸಿ ಕೊಡುವ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News