ಮಕ್ಕಳ ಕಳ್ಳನೆಂದು ಶಂಕಿಸಿ ಥಳಿಸಿದ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

Update: 2018-08-20 15:24 GMT

ಮಂಗಳೂರು, ಆ.19: ಮಕ್ಕಳ ಕಳ್ಳನೆಂದು ಶಂಕೆ ವ್ಯಕ್ತಪಡಿಸಿ ವ್ಯಕ್ತಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಜ್ಪೆ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುಕಂಬಳ ನಿವಾಸಿಗಳಾದ ಶೇಖ್ ರಿಝ್ವಾನ್ (35), ಮುಹಮ್ಮದ್ ಇಮ್ತಿಯಾಝ್ (42), ಅಜ್ಮಲ್ ಖಾನ್ (43), ಮುಹಮ್ಮದ್ ಇಮ್ರಾನ್ (42), ಮುಹಮ್ಮದ್ ಇರ್ಫಾನ್ (38), ಶಾ ನವಾಝ್ ಧರ್ಮಸ್ಥಳ (19) ಬಂಧಿತ ಆರೋಪಿಗಳು.

ರವಿವಾರ ವೆಲೆನ್ಸಿಯ ನಿವಾಸಿ ಹಂಝ ತನ್ನ ಸ್ನೇಹಿತ ತೌಸೀಫ್ ನೊಂದಿಗಿದ್ದ ವೇಳೆ ಗುಂಪೊಂದು ಹಂಝ ಅವರನ್ನು ಮಕ್ಕಳ ಕಳ್ಳನೆಂದು ಶಂಕೆ ವ್ಯಕ್ತಪಡಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿತ್ತು. ಈ ವೇಳೆ ಮಾಹಿತಿ ಪಡೆದ ಪೊಲೀಸರು ಹಲ್ಲೆಗೊಳಗಾದ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಿದ್ದರು. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರ ಗಾಯಾಳುವಿಗೆ ಶರೀರದಲ್ಲಿ ನೋವು ಉಲ್ಬಣಿಸಿದೆ. ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ನಾನು ಅಮಾಯಕ: ಸಂತ್ರಸ್ತ ಹಂಝ

‘ಮಕ್ಕಳ ಕಳ್ಳನೆಂದು ಶಂಕೆ ವ್ಯಕ್ತಪಡಿಸಿ ಥಳಿಸಿದ ಪ್ರಕರಣದಲ್ಲಿ ತಾನು ಅಮಾಯಕ, ತನ್ನ ಕಿಸೆಯಲ್ಲಿ ಐದು ಚಾಕ್ಲೆಟ್‌ಗಳಿದ್ದವು. ಇದನ್ನೇ ಶಂಕಿಸಿ ಕಂಬಕ್ಕೆ ಕಟ್ಟಿ ಹಾಕಿದ ಸುಮಾರು 40 ಮಂದಿ ಇದ್ದ ತಂಡ ಗಂಭೀರ ಹಲ್ಲೆ ಮಾಡಿದೆ’ ಎಂದು ಹಲ್ಲೆಗೊಳಗಾದ  ಹಂಝ ದೂರಿದ್ದಾರೆ.

ತನ್ನೊಂದಿಗಿದ್ದ ಸ್ನೇಹಿತ ಅಲ್ಲಿಂದ ಓಡಿ ಪರಾರಿಯಾಗಿದ್ದು, ಇದು ಅಲ್ಲಿ ಸೇರಿದ್ದ ಗುಂಪಿನ ಆಕ್ರೋಶಕ್ಕೆ ಕಾರಣವಾಯಿತು. ಆಗ ಅಲ್ಲಿ ಸೇರಿದ್ದ ಗುಂಪು ತನ್ನ ಮೇಲೆ ಏಕಾಏಕಿ ದಾಳಿ ನಡೆಸಿ, ಗಂಭೀರವಾಗಿ ಹಲ್ಲೆ ಮಾಡಿದೆ. ಅಲ್ಲದೆ, ಆತನನ್ನು ಕರೆ ತರಬೇಕು ಎಂದು ಒತ್ತಾಯಿಸಿ, ಹಲ್ಲೆ ನಡೆಸಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News