ರಾಜ್ಯದ 13 ಜಿಲ್ಲೆಗಳು ಬರ ಪೀಡಿತ: ಶಿವಶಂಕರ ರೆಡ್ಡಿ

Update: 2018-08-20 17:15 GMT

ಉಡುಪಿ, ಆ.20: ಕೊಡಗು, ಕರಾವಳಿ ಸೇರಿದಂತೆ ರಾಜ್ಯದ ದಕ್ಷಿಣದ ಹಲವು ಜಿಲ್ಲೆಗಳು ಅತಿವೃಷ್ಠಿಯಿಂದ ತೀವ್ರ ತೊಂದರೆಗೆ ಸಿಲುಕಿದ್ದರೆ, ಉತ್ತರ ಕರ್ನಾಟಕದ 13 ಜಿಲ್ಲೆಗಳು ಮಳೆಯ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದು ಬರ ಪೀಡಿತ ಜಿಲ್ಲೆಗಳಾಗಿವೆ ಎಂದು ರಾಜ್ಯ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದ್ದಾರೆ.

ಸೋಮವಾರ ಉಡುಪಿ ಜಿಲ್ಲೆಯ ಪ್ರವಾಸದಲ್ಲಿದ್ದ ಅವರು ಸಂಜೆ ನಾಯರ್‌ಕೆರೆಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ತಾನು ಇತ್ತೀಚೆಗೆ ರಾಯಚೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಹಲವು ಬರಪೀಡಿತ ಜಿಲ್ಲೆಗಳ ಪ್ರವಾಸ ಮಾಡಿದ್ದು, ಒಣ ಬೇಸಾಯದ ಇಲ್ಲೆಲ್ಲಾ ಭಿತ್ತನೆ ಮಾಡಿದ ಬೀಜದ ಅರ್ಧದಷ್ಟು ಭಾಗ ಈಗಾಗಲೇ ನಾಶವಾಗಿವೆ. ಈ ಜಿಲ್ಲೆಗಳ ಬರ ಪರಿಸ್ಥಿತಿಯ ಕುರಿತಂತೆ ಇಲಾಖೆ ವರದಿಯನ್ನು ಸಿದ್ಧಪಡಿಸಿದ್ದು, ಅದನ್ನು ಮುಂದಿನ ಕ್ಯಾಬಿನೆಟ್ ಸಭೆಯ ಮುಂದಿರಿಸಿ ಚರ್ಚಿಸಲಾಗುವುದು. ಬಳಿಕ ಈ ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ರೆಡ್ಡಿ ತಿಳಿಸಿದರು.

ನಾನು ಪ್ರವಾಸ ಮಾಡಿದ ಜಿಲ್ಲೆಗಳಲ್ಲಿ ಶೇ.50ಕ್ಕೂ ಅಧಿಕ ಬಿತ್ತನೆ ಮಾಡಿದ ಬೀಜ ನಾಶವಾಗಿದೆ. ಒಮ್ಮೆ ಮಳೆ ಬಂದು ಬಿತ್ತನೆ ಮಾಡಿದ ನಾಲ್ಕು ವಾರಗಳ ಕಾಲ ಮಳೆ ಬಾರದೇ ಶುಷ್ಕ ವಾತಾವರಣವಿದ್ದರೆ, ಅದನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಅವಕಾಶವಿದೆ ಎಂದು ಅವರು ವಿವರಿಸಿದರು.

ಇಂದು ತಾನು ಕರಾವಳಿಯಲ್ಲಾದ ಬೆಳೆ ಹಾನಿಯ ಕುರಿತು ಪರಿಶೀಲನೆಗೆ ಬಂದಿಲ್ಲ. ನಾನು ಬಂದಿರುವುದು ಕೃಷಿ ಇಲಾಖೆಯ ಕಾರ್ಯಕ್ರಮ ಬಗ್ಗೆ ಹಾಗೂ ಅಭಿಯಾನದ ಬಗ್ಗೆ ಪರಿಶೀಲಿಸಲು. ಹೀಗಾಗಿ ಇತ್ತೀಚೆಗೆ ಮಳೆಯಿಂದಾದ ಬೆಳೆ ಹಾನಿಯ ಕುರಿತು ಗಮನ ಹರಿಸಿಲ್ಲ ಎಂದರು.

ಜಿಲ್ಲೆಯಲ್ಲಿ ಭತ್ತ ಮುಖ್ಯ ಬೆಳೆಯಾಗಿದ್ದು, ರೈತರು ಯಾಂತ್ರೀಕರಣದ ಬಗ್ಗೆ ಒಲವು ತೋರಿಸುತಿದ್ದಾರೆ. ನಾಟಿ ಯಂತ್ರ, ಕಟಾವು ಯಂತ್ರ ಹೆಚ್ಚು ಒದಗಿಸಬೇಕೆಂಬುದು ಅವರ ಬೇಡಿಕೆಯಾಗಿದೆ. ಬ್ರಹ್ಮಾವರ ಕೃಷಿ ಕಾಲೇಜಿನಲ್ಲಿ ಇವುಗಳ ಬಗ್ಗೆ ಸಂಶೋಧನೆಗಳಾಗುತಿದ್ದು, ಅಲ್ಲಿಗೂ ಭೇಟಿ ನೀಡಿದ್ದೇನೆ ಎಂದರು.

ಆದರೆ ಕಳೆದ ತಿಂಗಳು ಆದ ಬೆಳೆ ಹಾನಿಗೆ ಸುಮಾರು 7.60 ಲಕ್ಷ ರೂ. ಪರಿಹಾರವನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಆದ ನಷ್ಟದ ಕುರಿತು ಇಲಾಖಾ ಅಧಿಕಾರಿಗಳಿಂದ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ರೈತರು ತಮ್ಮ ಜಮೀನಿಗೆ ನುಗ್ಗುವ ಉಪ್ಪು ನೀರಿನಿಂದ ಆಗುತ್ತಿರುವ ಬೆಳೆ ಹಾನಿಯ ಬಗ್ಗೆ ದೂರಿದ್ದು, ನದಿ ಹಾಗೂ ತೊರೆಗುಂಟ ತಡೆಗೋಡೆ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. ಇದೊಂದು ಬಹು ವೆಚ್ಚದ ಯೋಜನೆಯಾಗಿದ್ದು, ಈ ಬಗ್ಗೆ ಸಣ್ಣ ನೀರಾವರಿ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಡಿಕೆ ಕೃಷಿ, ಕೊಳೆರೋಗಕ್ಕೆ ತುತ್ತಾಗಿರುವ ಬಗ್ಗೆ ತನ್ನ ಗಮನ ಸೆಳೆಯಲಾಗಿದ್ದು, ಈ ಬಗ್ಗೆ ಪರಿಶೀಲಿಸಿ ವರದಿಯೊಂದನ್ನು ತಯಾರಿಸುವಂತೆ ತೋಟಗಾರಿಕಾ ಇಲಾಖೆಗೆ ಸೂಚಿಸಿರುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News