‘ಪ.ಜಾತಿ, ವರ್ಗದ ಗುತ್ತಿಗೆದಾರರಿಗೆ ಶೇ.24.1 ಮೀಸಲಾತಿ ಕಲ್ಪಿಸಿ’

Update: 2018-08-20 17:16 GMT

 ಉಡುಪಿ, ಆ.20: ರಾಜ್ಯ ಸರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ ಶೇ.24.10ರಷ್ಟು ಮೀಸಲಾತಿ ಕಲ್ಪಿಸಿ ‘ಪಾರದರ್ಶಕ ಕಾಯ್ದೆ’ಗೆ ತಿದ್ದುಪಡಿ ತಂದಿದ್ದು, ಕಳೆದ ವರ್ಷ ಜೂ.29ಕ್ಕೆ ಈ ಬಗ್ಗೆ ಆದೇಶ ಹೊರಡಿಸಿದ್ದಲ್ಲದೇ, ಅಧಿಕೃತವಾಗಿ ವಿಶೇಷ ರಾಜ್ಯಪತ್ರವನ್ನು ಹೊರಡಿಸಿದೆ. ಈ ಕಾಯ್ದೆಯನ್ನು ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸಂಘದ ರಾಜ್ಯಾಧ್ಯಕ್ಷ ಮಹದೇವಸ್ವಾಮಿ ಎನ್. ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಈ ಆದೇಶ ಉಡುಪಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಗೊಳ್ಳುತ್ತಿಲ್ಲ. ತಿದ್ದುಪಡಿಗೊಂಡ ‘ಪಾರದರ್ಶಕ ಕಾಯ್ದೆ’ಯಂತೆ 50 ಲಕ್ಷ ರೂ.ಗಿಂದ ಕೆಳಗಿನ ಎಲ್ಲಾ ಕಾಮಗಾರಿಗಳಲ್ಲೂ ಪ.ಜಾತಿ ಮತ್ತು ಪ.ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ನೀಡಲೇ ಬೇಕಿದೆ. ಆದರೆ ಜಿಲ್ಲೆಯ ವಿವಿಧ ಇಲಾಖೆಗಳು ಇವುಗಳನ್ನು ಉಲ್ಲಂಘಿಸುತ್ತಿವೆ ಎಂದು ದೂರಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು ಹಾಗೂ ಅವರ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಸರಕಾರ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲಾ ಸರಕಾರಿ ಇಲಾಖೆಗಳ ಕಾಮಗಾರಿ ಗುತ್ತಿಗೆಯಲ್ಲೂ ಮೀಸಲಾತಿ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ 300ರಿಂದ 400 ಮಂದಿ ಪ.ಜಾತಿ, ವರ್ಗಗಳ ಗುತ್ತಿಗೆದಾರರಿದ್ದಾರೆ ಎಂದರು.

ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾಮಗಾರಿಗಳನ್ನು ವಿಭಜಿಸಬಾರ ದೆಂದು ಸ್ಪಷ್ಟ ಆದೇಶವಿದ್ದರೂ, ಉದ್ದೇಶಪೂರ್ವಕವಾಗಿ ವಿಭಜಿತ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುತಿದ್ದಾರೆ. ಪ.ಜಾತಿ, ವರ್ಗಗಳ ಗುತ್ತಿಗೆದಾರರನ್ನು ವಂಚಿಸಲು ಸಣ್ಣ ಸಣ್ಣ ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಮೂಲಕ ಟೆಂಡರ್ ಕರೆಯುತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ಕಾಮಗಾರಿಗಳನ್ನು ಪ.ಜಾತಿ, ವರ್ಗದ ಗುತ್ತಿಗೆದಾರರಿಗೆ ನೀಡದೇ ಎಲ್ಲಾ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಹಾಗೂ ನಿರ್ಮಿತಿ ಕೇಂದ್ರಗಳಿಗೆ ನೀಡುತಿದ್ದಾರೆ ಎಂದರು. ಸಮಾಜ ಕಲ್ಯಾಣ ಇಲಾಖೆ ಈಗಾಗಲೇ ಕೆಆರ್‌ಐಡಿಎಲ್ ಹಾಗೂ ನಿರ್ಮಿತಿ ಕೇಂದ್ರಗಳಿಗೆ ಗುತ್ತಿಗೆ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ ಎಂದು ಮಹದೇವಸ್ವಾಮಿ ನುಡಿದರು.

ತಿದ್ದುಪಡಿಯಾದ ಕಾಯ್ದೆಯಂತೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡದೇ ಟೆಂಡರ್ ಕರೆಯುವುದು ಪಾರದರ್ಶಕ ಕಾಯ್ದೆಯ ಉಲ್ಲಂಘನೆ ಯಾಗಿದ್ದು, ಕಾಯ್ದೆಯ ಸೆಕ್ಷನ್23ರಂತೆ ಯಾರೇ ಆದರೂ ಕಾಯ್ದೆ ಉಲ್ಲಂಘಿಸಿದರೆ ಮೂರು ವರ್ಷಗಳ ಸೆರೆವಾಸ ಹಾಗೂ 5000ರೂ. ದಂಡ ವಿಧಿಸಲು ಅವಕಾಶವಿದೆ ಎಂದರು.

ಅದರಂತೆ ಕಾಯ್ದೆಯನ್ನು ಉಲ್ಲಂಘಿಸಿ ಗುತ್ತಿಗೆ ನೀಡಿದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾವು ಜಿಲ್ಲಾಧಿಕಾರಿಗಳನ್ನು ವಿನಂತಿಸುವುದಾಗಿ ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಯು.ಪರಮೇಶ್ವರ್, ಉಪಾಧ್ಯಕ್ಷ ಎಸ್.ನಾರಾಯಣ್, ಖಜಾಂಚಿ ಕಮಲಾಕ್ಷ ಚೇರ್ಕಾಡಿ, ಸಂಘಟನಾ ಕಾರ್ಯದರ್ಶಿ ಧನಂಜಯ ಕುಂದರ್ ಹಾಗೂ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News