ಪಕೃತಿ ವಿಕೋಪ: ನೆರಿಯ ಗ್ರಾಮದ ಸೇತುವೆಗೂ ಆತಂಕ

Update: 2018-08-20 17:49 GMT

ಬೆಳ್ತಂಗಡಿ, ಆ. 20: ಪಶ್ವಿಮ ಘಟ್ಟದ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಮಳೆಯಿಂದ ಜನರು ತತ್ತರಿಸಿದ್ದಾರೆ. ಧರೆಗಳ ಕುಸಿತಗಳು, ಮನೆ ಕುಸಿತ ಹಾಗೂ ನದಿಯಲ್ಲಿ ಪ್ರವಾಹದಿಂದಾಗಿ ಸೇತುವೆಗಳಿಗೂ ಹಾನಿಯಾಗಿದೆ.

ನೆರಿಯದ ಅಣಿಯೂರು ಹಳ್ಳ ನದಿಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಿಂದಾಗಿ ನೀರಿನ ಪ್ರವಾಹದಿಂದಾಗಿ ಬೃಹತ್ ಗಾತ್ರದ ಮರಗಳು ಕೊಚ್ಚಿಕೊಂಡು ಬಂದಿದ್ದು ಅಣಿಯೂರು- ಪುದುವೆಟ್ಟು ಸಂಪರ್ಕ ಸೇತುವೆಗೆ ಬಡಿದಿದೆ. ನೀರಿನ ರಭಸಕ್ಕೆ ಮರಗಳು ಸೇತುವೆಯ ಆಧಾರ ಸ್ತಂಭಗಳಿಗೆ ಬಡಿದ ಕಾರಣ ಸೇತುವೆಗೆ ಹಾನಿಯಾಗಿದೆ. ಬ್ರಿಟಿಷರ ಕಾಲದ ಸೇತುವೆ ಇದಾಗಿದ್ದೂ ಇದರ ಅಡಿಪಾಯ ಜಾರುತ್ತಿತ್ತು. ಹೊಸ ಸೇತುವೆಯ ನಿರ್ಮಾಣಕ್ಕೆ ಜನರು ಮನವಿ ನೀಡಿದ್ದರು. ಆದರೆ ಹಳೆಯ ಸೇತುವೆಯನ್ನು ಗಟ್ಟಿಗೊಳಿಸುವ ಕೆಲಸ ಸಂಬಂಧಪಟ್ಟ ಇಲಾಖೆ ಮಾಡಿತ್ತು.

 ಸೇತುವೆ ಪಕ್ಕದಲ್ಲಿ ನದಿಯ ದಡ ಭಾಗದ ಎತ್ತರದಲ್ಲಿ ಪೈಪ್ ಲೈನಿನ ಪಂಪ್ ಹೌಸಿದೆ. ಇಲ್ಲಿ ಬೃಹದಾಕಾರದ ನೀರಿನ ಟ್ಯಾಂಕ್‌ಗಳು ಕೂಡಾ ಇದೆ. ನೀರಿನ ರಭಸಕ್ಕೆ ಇದರ ತಡೆ ಗೋಡೆಗಳಿಗೆ ಹಾನಿಯಾಗಿದ್ದರೂ ಕುಸಿಯುವ ಭೀತಿ ಜನರಲ್ಲಿ ಆವರಿಸಿತ್ತು. ಸೇತುವೆಯ ಪಿಲ್ಲರ್‌ಗಳಿಗೆ ಸೇರಿಕೊಂಡ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದ ಮರವನ್ನು ಇನ್ನಷ್ಟೇ ತೆರವು ಮಾಡಬೇಕಾಗಿದೆ.

ಪ್ರಕೃತಿ ವಿಕೋಪದಿಂದ ನೆರಿಯ ಗ್ರಾಮದಲ್ಲಿ ಮನೆಗಳು ಹಾಗೂ ರಸ್ತೆಗಳು ಹಾನಿಯಾಗಿದೆ ಎಂದು ನೆರಿಯ ಗ್ರಾಪಂ ಅಧ್ಯಕ್ಷ ಮಹಮ್ಮದ್ ತಿಳಿಸಿದ್ದಾರೆ. ಬಾಂಜಾರು 1, ಗಂಡಿಬಾಗಿಲು 6, ಪಾದೆಗುಂಡಿ 3, ಪರಂದಾಡಿ 3 ಸೇರಿದಂತೆ 13 ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ರಸ್ತೆಗಳು ಸೇರಿದಂತೆ ಲೋಪೋಪಯೋಗಿ ರಸ್ತೆಗಳು ಹಾಳಾಗಿದೆ. ಗಂಡಿಬಾಗಿಲು, ಪರಪ್ಪು, ಕುಕ್ಕೆಜಾಲು, ಕೇರಿಮಾರ್, ಗಾಂಧಿನಗರ, ಪರಂದಾಡಿ, ಬಳಾಯಪಾದೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ರಸ್ತೆಗಳಲ್ಲಿ ನೀರಿನ ಒರತೆ ಜಾಸ್ತಿಯಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ ಗ್ರಾಪಂ ವ್ಯಾಪ್ತಿಯ ವಿವಿದೆಡೆಗಳಲ್ಲಿ ಬಾರೀ ಪ್ರಮಾಣದ ಭೂಕುಸಿತಗಳಾಗಿದ್ದು ಅಪಾರ ಕೃಷಿ ಹಾನಿಗಳು ಸಂಭವಿಸಿದೆ. ಇಲಾಖೆಗಳು ಜನರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸುವಂತೆ ಅವರು ಒತ್ತಾಯಿಸಿದ್ದಾರೆ. ನೆರಿಯ ಗ್ರಾಮ ವ್ಯಾಪ್ತಿಯಲ್ಲಿ ಮಂಗಳೂರು-ಬೆಂಗಳೂರು ಗ್ಯಾಸ್ ಪೈಪ್ ಲೈನ್ ಹಾದು ಹೋಗಿದ್ದು ಭೂ ಕುಸಿತಗಳಿಂದಾಗಿ ಹಲವೆಡೆ ಪೈಪ್ ಲೈನಿನ ಮೇಲೆ ಇರುವ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದೆ. ಅದಕ್ಕೆ ಕಟ್ಟಲಾಗಿದ್ದ ತಡೆಗೋಡೆಗಳೂ ಹಲವೆಡೆ ಕುಸಿತವಾಗಿದೆ. ದಟ್ಟವಾದ ಅರಣ್ಯದ ನಡುವೆ ಕಡಿದಾದ ಜಾಗದಲ್ಲಿ ಪೈಪ್ ಲೈನ್ ಹಾದುಹೋಗುತ್ತಿದ್ದು ಯಾವುದೇ ಸಂದರ್ಭ ಅಪಾಯಗಳು ಸಂಭವಿಸುತ್ತದೆಯೋ ಎಂಬ ಆತಂಕ ಜನರನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News