×
Ad

​ಅವಧಿಗೆ ಮುನ್ನ ಹದಗೆಟ್ಟ ರಸ್ತೆ: ಗುತ್ತಿಗೆದಾರರಿಂದಲೇ ದುರಸ್ತಿಗೊಳಿಸಲು ಸಚಿವ ಕೃಷ್ಣ ಭೈರೇಗೌಡ ಸೂಚನೆ

Update: 2018-08-21 18:11 IST

ಮಂಗಳೂರು, ಆ.21: ಅವಧಿಗೆ ಮುನ್ನ ಹದಗೆಟ್ಟ ರಸ್ತೆಗಳನ್ನು ಗುತ್ತಿಗೆದಾರರಿಂದಲೇ ದುರಸ್ತಿಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದ್ದಾರೆ.

ದ.ಕ.ಜಿ ಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆ ಕಾಮಗಾರಿಯ ಗುತ್ತಿಗೆದಾರರು 5 ವರ್ಷದೊಳಗೆ ನಿರ್ವಹಣೆ ಮಾಡುವ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಹಾಗಾಗಿ ಮಳೆಯಿಂದ ರಸ್ತೆಗಳು ಹದಗೆಟ್ಟಿದೆ ಎಂದು ಸಾರ್ವಜನಿಕರು ಆರೋಪಿಸುವ ಮುನ್ನ ಹದಗೆಟ್ಟ ರಸ್ತೆಯ ನಿರ್ವಹಣೆಯನ್ನು ಅಧಿಕಾರಿಗಳು ಗುತ್ತಿಗೆದಾರರಿಂದಲೇ ಮಾಡಿಸಬೇಕು ಎಂದ ಸಚಿವರು, ದ.ಕ.ಜಿಲ್ಲೆಯಲ್ಲಿ 8,336 ಕಿ.ಮೀ. ರಸ್ತೆಯ ಪೈಕಿ ಇದೀಗ 705 ಕಿ.ಮೀ. ರಸ್ತೆಯು ಗುತ್ತಿಗೆದಾರರ ನಿರ್ವಹಣಾ ಅವಧಿಯ ವ್ಯಾಪ್ತಿಯೊಳಗೆ ಬರುತ್ತಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ಸುತ್ತೋಲೆ ಕಳುಹಿಸಬೇಕು. ಅದರ ಪ್ರತಿಯನ್ನು ಆಯಾ ಕ್ಷೇತ್ರದ ಶಾಸಕರಿಗೂ ಸಲ್ಲಿಸಬೇಕು ಎಂದರು.

ಮಳೆಯಿಂದ ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಹೊರತುಪಡಿಸಿ ಉಳಿದವುಗಳನ್ನು ಮಳೆಗಾಲದ ಬಳಿಕ ದುರಸ್ತಿ ಮಾಡಿಸಲು ಸೂಚಿಸಿದ ಸಚಿವ ಕೃಷ್ಣ ಭೈರೇಗೌಡ ವಾರದೊಳಗೆ ವಿವಿಧ ಮೂಲದಿಂದ ಲಭ್ಯವಾಗುವ ಹಣವನ್ನು ಹೊಂದಿಸಲು ತಿಳಿಸಿದರು.

‘ಜಲಧಾರ’ ಯೋಜನೆಯ ಗುರಿ ಹೆಚ್ಚಿಸಿ: ಬರ ಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ಜಾರಿಗೊಳಿಸಲಾದ ಜಲಧಾರ ಯೋಜನೆಯ ಗುರಿಯನ್ನು ಜಿಲ್ಲೆಯಲ್ಲಿ ಹೆಚ್ಚಿಸಬೇಕಿದೆ. ಪ್ರತೀ ಗ್ರಾಮದಲ್ಲಿ ಕನಿಷ್ಠ 50 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಒತ್ತು ನೀಡಬೇಕು. ಈವರೆಗೆ  ರೂ.ಮೊತ್ತದಲ್ಲಿ ಕೈಗೆತ್ತಿಕೊಂಡ 460 ಕಿಂಡಿ ಅಣೆಕಟ್ಟುಗಳ ಪೈಕಿ 298 ಪೂರ್ಣಗೊಂಡಿರುವುದು ಉತ್ತಮ ಸಾಧನೆಯಾಗಿದೆ. ಆದರೆ, ಇದರ ಗುರಿಯನ್ನು ಹೆಚ್ಚಿಸುವ ಮೂಲಕ ಉದ್ಯೋಗ ಖಾತರಿಗೆ ಬಲ ತುಂಬಬೇಕಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಜಿಲ್ಲೆಯ 29 ಹೊಸ ಗ್ರಾಪಂಗಳ ಪೈಕಿ 6 ಗ್ರಾಪಂಗೆ ಹೊಸ ಕಟ್ಟಡ ನಿರ್ಮಿಸಲಾಗಿದೆ. 9 ಕಟ್ಟಡಗಳು ಪ್ರಗತಿಯಲ್ಲಿದೆ. ಇನ್ನು 14 ಕಟ್ಟಡಗಳು ಬೇರೆ ಬೇರೆ ಕಾರಣಕ್ಕೆ ನಿರ್ಮಾಣಗೊಂಡಿಲ್ಲ. ಅಲ್ಲದೆ ಜಿಲ್ಲೆಯ 230 ಗ್ರಾಪಂಗಳ ಪೈಕಿ 138 ಗ್ರಾಪಂಗಳು ತೆರಿಗೆ ಪರಿಷ್ಕರಿಸಿದೆ. ಇನ್ನು 92 ಗ್ರಾಪಂಗಳು ತೆರಿಗೆ ಪರಿಷ್ಕರಿಸಿಲ್ಲ ಎಂದು ದ.ಕ.ಜಿಪಂ ಸಿಇಒ ಡಾ. ಎಂ.ಆರ್. ರವಿ ಮಾಹಿತಿ ನೀಡಿದರು.

ಸಭೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ಜನಾರ್ದನ ಗೌಡ, ಯು.ಪಿ.ಇಬ್ರಾಹೀಂ, ಅನಿತಾ ಶೆಟ್ಟಿ, ಶಾಸಕ ರಾಜೇಶ್ ನಾಯ್ಕ್ ಉಳೆಪ್ಪಾಡಿ ಮತ್ತಿತರರಿದ್ದರು.

ಅಧಿಕಾರಿಗಳ ವಿರುದ್ಧ ಸಿಡಿಮಿಡಿ: ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ ನುಣುಚಿಕೊಂಡ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಸಿಡಿಮಿಡಿಗೊಂಡ ಘಟನೆಯೂ ಸಭೆಯಲ್ಲಿ ನಡೆಯಿತು. ವಾರದ ಮೊದಲೇ ಸಭೆಯ ಬಗ್ಗೆ ಸೂಚನೆ ನೀಡಿದ್ದರೂ ಸ್ಪಷ್ಟ ಮಾಹಿತಿ ಕ್ರೋಢೀಕರಿಸಿಕೊಂಡು ಬಂದಿಲ್ಲ. ಈಗ ನಾನು ಹೇಳುವ ಸೂಚನೆಯನ್ನಾದರೂ ಕೇಳಿಸಿಕೊಳ್ಳುವ ವ್ಯವಧಾನ ತೋರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News