×
Ad

ಮಂದಸೌರ್ ಬಾಲಕಿಯ ಅತ್ಯಾಚಾರ ಪ್ರಕರಣ: ಇಬ್ಬರಿಗೆ ಮರಣದಂಡನೆ

Update: 2018-08-21 19:16 IST

ಮಂದಸೌರ(ಮ.ಪ್ರ),ಆ.21: ಮಂದಸೌರದಲ್ಲಿ ಎಂಟರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಇಬ್ಬರಿಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ. ಘಟನೆ ನಡೆದ ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.

ಜೂನ್ 26ರಂದು ಮನೆಗೆ ಮರಳಲು ತನ್ನ ಶಾಲೆಯೆದುರು ಪೋಷಕರಿಗಾಗಿ ಕಾಯುತ್ತಿದ್ದ ಬಾಲಕಿಗೆ ಆಮಿಷವೊಡ್ಡಿ ತಮ್ಮೊಂದಿಗೆ ಕರೆದೊಯ್ದಿದ್ದ ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿ ಹಿಂಸಿಸಿ,ಬಳಿಕ ಚೂರಿಯಿಂದ ಕತ್ತನ್ನು ಸೀಳಿ ಸಾಯಲು ಬಿಟ್ಟು ಪರಾರಿಯಾಗಿದ್ದರು. ಗಂಭೀರ ಗಾಯಗಳಾಗಿದ್ದ ಬಾಲಕಿಯನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದು,ಅಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

ಆರೋಪಿಗಳಾದ ಇರ್ಫಾನ್(20) ಮತ್ತು ಆಸಿಫ್(24) ಎಂಬವರನ್ನು ಸಿಸಿಟಿವಿ ಫೂಟೇಜ್‌ಗಳ ನೆರವಿನಿಂದ ಘಟನೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದರು.

ಈ ಘಟನೆ ಮಧ್ಯಪ್ರದೇಶದಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು, ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಲಾಗಿತ್ತು. ಶಿವರಾಜ್ ಸಿಂಗ್ ಸರಕಾರವು ಮಹಿಳೆಯರ ಸುರಕ್ಷತೆಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್,ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News