ಶೀಘ್ರದಲ್ಲೆ ರೈತರಿಗೆ ಗುರುತಿನ ಚೀಟಿ ವಿತರಣೆ: ಸಚಿವ ಶಿವಶಂಕರ್ ರೆಡ್ಡಿ

Update: 2018-08-21 14:20 GMT

ಮೂಡುಬಿದಿರೆ, ಅ.21:  ರೈತರಿಗೆ ಶೀಘ್ರದಲ್ಲೆ ಸರಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಗುರುತಿನ ಚೀಟಿಯನ್ನು ವಿತರಿಸಲಾಗುವುದು. ಗುರುತು ಚೀಟಿಯನ್ನು ಪಡೆಯಲು ರೈತರು ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಹೆಸರು ನೋಂದಾವಣೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಎನ್.ಹೆಚ್ ಶಿವಶಂಕರ್ ರೆಡ್ಡಿ ಹೇಳಿದರು.

ಅವರು ಮಂಗಳವಾರ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕೃಷಿ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಕೃಷಿಗೆ ಕೂಲಿ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಯಾಂತ್ರಿಕ ಕೃಷಿಗೆ ರೈತರು ಒತ್ತು ಕೊಡಬೇಕು. ಸರಕಾರ ಕೂಡ ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಪ್ರೋತ್ಸಾಹವನ್ನು ನೀಡಲು ಬದ್ಧ ಎಂದರು.

ಪುತ್ತಿಗೆ ಗ್ರಾಮದ ಕಂಚಿಬೈಲು ಪಾಂಡುರಂಗ ಭಟ್ ಅವರ ಜಮೀನಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಾಣವಾದ ಕೃಷಿ ಹೊಂಡವನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಸಚಿವರು ಕಡಂದಲೆ ಪರಾರಿ ಸಂತೋಷ್ ಶೆಟ್ಟಿ ಅವರ ಆಡು ಸಾಕಣೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. 

ಮಾಜಿ ಸಚಿವ ಅಭಯಚಂದ್ರ ಜೈನ್, ಮಂಗಳೂರು ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಎಪಿಎಂಸಿ ಮಾಜಿ ಸದಸ್ಯ ವಾಸುದೇವ ನಾಯಕ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಇಮ್ಯಾನುವೆಲ್ ಆಂಟನಿ, ಡೆಪ್ಯೂಟಿ ಡೈರೆಕ್ಟರ್ ಮುತ್ತೂರಾಜ್, ಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್, ಸಹಾಯಕ ನಿರ್ದೇಶಕಿ ವೀಣಾ, ರೈತ ಸಂಪರ್ಕ ಕೇಂದ್ರದ ಲೆಕ್ಕಾಧಿಕಾರಿ ಅನಾ ಲೋಬೊ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News