ಆಧಾರ್ ದತ್ತಾಂಶ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ದಾವೆ

Update: 2018-08-21 14:36 GMT

ಹೊಸದಿಲ್ಲಿ, ಆ.21: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ದ ದತ್ತಾಂಶಮೂಲದಿಂದ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಧಾರ್ ದತ್ತಾಂಶಗಳ ಭದ್ರತೆ ಮತ್ತು ವೈಯಕ್ತಿಕ ಖಾಸಗಿತನದ ಬಗ್ಗೆ ಆತಂಕ ವ್ಯಕ್ತಪಡಿಸಿ ದಿಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಮಂಗಳವಾರ ಸೂಚನೆ ನೀಡಿದೆ. ಯುಐಡಿಎಐ, ರಾಷ್ಟ್ರೀಯ ಮಾಹಿತಿ ಕೇಂದ್ರ ಹಾಗೂ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೂ ನ್ಯಾಯಾಧೀಶ ಎಸ್.ರವೀಂದ್ರ ಭಟ್ ಮತ್ತು ನ್ಯಾಯಾಧೀಶ ಅನು ಮಲ್ಹೋತ್ರಾ ಅವರ ಪೀಠ ನೋಟಿಸ್ ಜಾರಿ ಮಾಡಿದೆ. ನವೆಂಬರ್ 19ರಂದು ನಡೆಯಲಿರುವ ಮುಂದಿನ ವಿಚಾರಣೆಗೂ ಮೊದಲು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ನ್ಯಾಯಾಲಯ ಪೀಠ ಆದೇಶಿಸಿದೆ. ಕೇರಳ ಮೂಲದ ವಕೀಲ ಶಮ್ನಾಡ್ ಬಶೀರ್ ಈ ಮೇಲ್ಮನವಿಯನ್ನು ದಾಖಲಿಸಿದ್ದು, ಆಧಾರ್ ವ್ಯವಸ್ಥೆಯಲ್ಲಿ ನಡೆದಿರುವ ಹಲವು ಲೋಪಗಳಿಂದಾಗಿ ಕಳೆದ ಜನವರಿಯಿಂದ ಅನೇಕ ಜನರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ. ಹಾಗಾಗಿ ಇಂಥ ಜನರಿಗೆ ಪರಿಹಾರ ಒದಗಿಸುವುದು ಯುಐಡಿಎಐ ಹಾಗೂ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಮಾಹಿತಿಗಳನ್ನು ರಕ್ಷಿಸಲು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಯುಐಡಿಎಐ ತೋರಿಸಿರುವ ನಿರ್ಲಕ್ಷ ಮತ್ತು ಉದ್ದೇಶಪೂರ್ವಕ ಬೇಜವಾಬ್ದಾರಿತನದ ಪರಿಣಾಮವಾಗಿ ಈ ಲೋಪಗಳು ಉಂಟಾಗಿವೆ ಎಂದು ಬಶೀರ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News