ಬಿಸಿಎಂ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ವಜಾಗೊಳಿಸದಂತೆ ಹೈಕೋರ್ಟ್ ಆದೇಶ

Update: 2018-08-21 14:40 GMT

ಪುತ್ತೂರು,ಆ.21 : ಅಲ್ಪ ಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಸೇವೆಯಿಂದ ವಜಾಗೊಳಿಸದಂತೆ ರಾಜ್ಯ ಹೈಕೋರ್ಟು ಆದೇಶ ನೀಡಿದೆ. 

ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿರುವ ಹಲವು ಅಲ್ಪ ಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಐದಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಅಡುಗೆ ಮತ್ತು ಅಡುಗೆ ಸಹಾಯಕರಾಗಿ ಹಾಗೂ ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಆದರೆ 2018ರಲ್ಲಿ ಸಮಾಜ ಕಲ್ಯಾಣ ಇಲಾಖೆಯು ಹೊರಗುತ್ತಿಗೆ ಆದಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಹುದ್ದೆಗೆ ಹೊಸ ಅಭ್ಯರ್ಥಿಗಳನ್ನು ನೇಮಿಸಿ ಆದೇಶವನ್ನು ಹೊರಡಿಸಿದ್ದು, ಈ ಆದೇಶವನ್ನು ಪ್ರಶ್ನಿಸಿ ಹೊರಗುತ್ತಿಗೆ ನೌಕರರ ಪರವಾಗಿ ಸುನಂದಾ ಮತ್ತು ಇತರರು ರಾಜ್ಯ ಹೈಕೋರ್ಟು ಮೆಟ್ಟಲೇರಿದ್ದರು. 

ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ವರ್ಗಗಳ ವಿದ್ಯಾರ್ಥಿ ನಿಲಯಗಳ ನೌಕರರಾದ ಸುನಂದಾ ಮತ್ತು ಇತರರು ರಾಜ್ಯ ಹೈಕೋರ್ಟಿನಲ್ಲಿ ರಿಟ್ ಪಿಟಿಷನ್ ದಾಖಲಿಸಿ ತಮ್ಮನ್ನು ಸೇವೆಯಿಂದ ವಜಾಗೊಳಿಸದಂತೆ ಮತ್ತು ಸೇವೆಯಲ್ಲಿ ಖಾಯಂಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ವಾದ ವಿವಾದಗಳನ್ನು ಪರಿಶೀಲಿಸಿದ ಹೈಕೋರ್ಟು  ಹೊಸ ನೇಮಕಾತಿಯನ್ನು ಮೇಲಿನ ಪ್ರಕರಣಗಳ ಅಂತಿಮ ಆದೇಶಕ್ಕೊಳಪಟ್ಟು ಶರ್ತ ಬದ್ಧವಾಗಿ ಮಾಡುವಂತೆ ಆದೇಶಿಸಿದೆ.

ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಹವಾಲುಗಳನ್ನು ಆಲಿಸಿ ಸರ್ಕಾರವು ಹೊರಗುತ್ತಿಗೆದಾರರನ್ನು ಈ ಹಿಂದಿನಂತೆ ಸೇವೆಯಲ್ಲಿ ಮುಂದುವರಿಸುವುದಾಗಿ ರಿಟ್ ಅಪೀಲು ಪ್ರಕರಣದಲ್ಲಿ ಒಪ್ಪಿಕೊಂಡಿರುವುದರಿಂದ ಅರ್ಜಿದಾರರುಗಳನ್ನು ಯಾವುದೇ ಕಾರಣಕ್ಕೂ ವಜಾಗೊಳಿಸದಂತೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News