ಆ.22 ರಂದು ಬಕ್ರೀದ್ ಆಚರಣೆ: ಮಂಗಳೂರಿನಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು

Update: 2018-08-21 15:07 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಆ.21: ನಗರದ ಬಾವುಟ ಗುಡ್ಡೆ ಈದ್ಗಾ ಮಸೀದಿಯಲ್ಲಿ ಆ.22ರಂದು ಬಕ್ರೀದ್‌ನ್ನು ಆಚರಿಸಲಾಗುತ್ತಿದ್ದು, ಅಂದು ಬೆಳಗ್ಗೆ 6:30ರಿಂದ ಬೆಳಗ್ಗೆ 10 ಗಂಟೆಯವರೆಗೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಹೆಚ್ಚುವರಿ ಮೆಜಿಸ್ಟ್ರೇಟ್ ಆದೇಶ ಹೊರಡಿಸಿದ್ದಾರೆ.

ಬೆಳಗ್ಗೆ 6:30 ರಿಂದ ಬೆಳಗ್ಗೆ 10 ಗಂಟೆಯವರೆಗೆ ಹಂಪನಕಟ್ಟೆಯಿಂದ ಬಾವುಟಗುಡ್ಡೆಯ ಮೂಲಕ ಡಾ.ಅಂಬೇಡ್ಕರ್ ವೃತ್ತದ ಕಡೆಗೆ ಸಂಚರಿಸಬೇಕಾದ ವಾಹನಗಳು ಕೆ.ಎಸ್.ಆರ್. ರಸ್ತೆ ಮೂಲಕ ಸಂಚರಿಸಬೇಕು. ಸಿಟಿ ಸೆಂಟರ್ ಕಡೆಯಿಂದ ಬಾವುಟಗುಡ್ಡೆ ಕಡೆಗೆ ಬರುವ ರಸ್ತೆಯಲ್ಲಿ ಹಾಗೂ ಸಿಟಿ ಸೆಂಟರ್ ಪಾರ್ಕಿಂಗ್‌ನಿಂದ ಬಾವುಟಗುಡ್ಡೆಗೆ ಬರುವ ರಸ್ತೆಯಲ್ಲಿ ಈ ಸಮಯದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬಾವುಟಗುಡ್ಡೆಯ ನಗರ ಕೇಂದ್ರ ಗ್ರಂಥಾಲಯದಿಂದ ವಿಜಯಾ ಬ್ಯಾಂಕ್ ತನಕ ರಸ್ತೆಯ ಎಡಬದಿ ಮಾತ್ರ ವಾಹನಗಳನ್ನು ತಾತ್ಕಾಲಿಕವಾಗಿ ಪಾರ್ಕ್ ಮಾಡಲು ಸೂಚಿಸಲಾಗಿದೆ.

ಬಾವುಟ ಗುಡ್ಡೆ ಈದ್ಗಾ ಮಸೀದಿ ಪ್ರದೇಶದ ಸುತ್ತಮುತ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಸಮಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಲಾಗಿದೆ.

ಈ ನಿರ್ಬಂಧನೆಗಳು ವಿಐಪಿ ವಾಹನಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News