ಮೂವತ್ತು ವರ್ಷಗಳ ನಂತರ ಅಂಗವೈಕಲ್ಯ ಪಿಂಚಣಿಯನ್ನು ಪಡೆದುಕೊಂಡ ಯೋಧ
ಹೊಸದಿಲ್ಲಿ, ಆ.21: ಅಂಗವೈಕಲ್ಯದಿಂದಾಗಿ ಸೇನೆಯಿಂದ ನಿವೃತ್ತಿ ಹೊಂದಿದ್ದ ಜಿತ್ ಸಿಂಗ್ ಕೊನೆಗೂ ಮೂವತ್ತು ವರ್ಷಗಳ ನಂತರ ಅಂಗವೈಕಲ್ಯ ಪಿಂಚಣಿಯನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ನ್ಯಾಯಾಧೀಶ ಎಂ.ಎಸ್ ಚೌಹಾಣ್ ಮತ್ತು ಲೆಫ್ಟಿನೆಂಟ್ ಜನರಲ್ ಮುನಿಶ್ ಸಿಬಲ್ ಅವರನ್ನೊಳಗೊಂಡ ಸಶಸ್ತ್ರ ಪಡೆಗಳ ಚಂಡೀಗಡದಲ್ಲಿರುವ ಪೀಠ, ಸೇನೆಯಲ್ಲಿ ಸೇವೆ ಸಲ್ಲಿಸುವ ವೇಳೆ ಬಿಡುವಿನಲ್ಲಿದ್ದರೂ ಅವಘಡಗಳು ಸಂಭವಿಸಿ ಉಂಟಾಗುವ ಅಂಗವೈಕಲ್ಯವನ್ನು ಮಿಲಿಟರಿ ಸೇವೆಯಲ್ಲಿ ಸಂಭವಿಸಿರುವ ಅನಾಹುತ ಎಂದು ಪರಿಗಣಿಸಿ ಯೋಧರಿಗೆ ಅಂಗವೈಕಲ್ಯ ಪಿಂಚಣಿ ನೀಡಬೇಕು ಎಂದು ಆದೇಶ ನೀಡುವ ಮೂಲಕ ಜಿತ್ ಸಿಂಗ್ ತನ್ನ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ.
ಜಿತ್ ಸಿಂಗ್, ಹರ್ಯಾಣದಲ್ಲಿರುವ ಅಂಬಾಲಾದಲ್ಲಿನ ಸೇನಾ ವಿಭಾಗದಿಂದ ಮಾರುಕಟ್ಟೆಗೆ ತೆರಳಿದ್ದ ವೇಳೆ ಟ್ರಕ್‌ವೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಸಿಂಗ್ ಅಂಗವೈಕಲ್ಯ ಹೊಂದಿದ್ದರು. ಇದರ ಪರಿಣಾಮವಾಗಿ 1989ರಲ್ಲಿ ಅವರನ್ನು ಯಾವುದೇ ಪಿಂಚಣಿ ನೀಡದೆ ಸೇನೆಯಿಂದ ಬಿಡುಗಡೆಗೊಳಿಸಲಾಗಿತ್ತು. ಇದು ಜಿತ್ ಮಾರುಕಟ್ಟೆಗೆ ತೆರಳಿದ್ದ ವೇಳೆ ನಡೆದ ಅಪಘಾತವಾದ ಕಾರಣ ಅವರಿಗೆ ಅಂಗವೈಕಲ್ಯ ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದ ಸೇನೆ, ಸಾಮಾನ್ಯ ಪಿಂಚಣಿ ಪಡೆಯಲು ಅರ್ಹರಾಗುವ ಸೇವಾ ಅವಧಿಯನ್ನು ಸಿಂಗ್ ಪೂರೈಸಿಲ್ಲ ಎಂಬ ಕಾರಣಕ್ಕೆ ಅವರಿಗೆ ಸಾಮಾನ್ಯ ಪಿಂಚಣಿಯನ್ನು ನೀಡಲೂ ನಿರಾಕರಿಸಿತ್ತು. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಜಿತ್ ಸಿಂಗ್, ಯೋಧರು ತಮ್ಮ ರಜೆಯನ್ನು ಕಳೆದು ತಮ್ಮ ವಿಭಾಗಕ್ಕೆ ಮರಳುವ ಸಮಯದಲ್ಲಿ ಸಂಭವಿಸುವ ಅವಘಡಗಳಿಂದ ಅಂಗವೈಕಲ್ಯ ಉಂಟಾದರೆ ಅವರಿಗೂ ಅಂಗವೈಕಲ್ಯ ಪಿಂಚಣಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳು ಆದೇಶಿಸಿವೆ. ಅದರಲ್ಲೂ ನಾನಂತೂ ರಜೆಯಲ್ಲಿರಲಿಲ್ಲ ಬದಲಿಗೆ ಬಿಡುವಿನ ವೇಳೆ ಮಾರುಕಟ್ಟೆಗೆ ತೆರಳಿ ನನ್ನ ವಿಭಾಗಕ್ಕೆ ವಾಪಸ್ ಆಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದರು.