ಕೊಡಗು ಪ್ರಾಕೃತಿಕ ವಿಕೋಪ: ರಾಜ್ಯ ಸರಕಾರಿ ನೌಕರರ ಒಂದು ದಿನದ ವೇತನ ನೀಡಿಕೆ
Update: 2018-08-21 20:53 IST
ಉಡುಪಿ, ಆ.21: ಕೊಡಗು ಜಿಲ್ಲೆಯಲ್ಲಿ ಆದ ಪ್ರಕೃತಿ ವಿಕೋಪದಿಂದ ಬಳಲುತ್ತಿರುವವರ ರಕ್ಷಣೆಗಾಗಿ ಮಾನವೀಯತೆ ಮೆರೆಯಲು ಜಿಲ್ಲೆಯ ಸಮಸ್ತ ಸರಕಾರಿ ನೌಕರರ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ತೀರ್ಮಾನಿಸಿದೆ ಎಂದು ಜಿಲ್ಲಾ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಇಎಸ್‌ಐ ಆಸ್ಪತ್ರೆಯ ಸಿಬ್ಬಂದಿ ಹರೀಶ್ ವೈಯಕ್ತಿಕವಾಗಿ ಒಂದು ದಿನದ ವೇತನದೊಂದಿಗೆ ಹೆಚ್ಚುವರಿಯಾಗಿ ರೂ.5000 ನೀಡಿದರು. ಸಮಿತಿಯ ನಿರ್ಧಾರಕ್ಕೆ ಜಿಲ್ಲೆಯ ಸಮಸ್ತ ಸರಕಾರಿ ನೌಕರರು ಸಹಕಾರ ನೀಡುವಂತೆ ಶೇರಿಗಾರ್ ಕೋರಿದರು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ರವೀಂದ್ರ ಹೆಬ್ಬಾರ್, ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಕೋಶಾಧಿಕಾರಿ ಚಂದ್ರಶೇಖರ್, ಕಾಪು ತಾಲೂಕು ಸಂಘದ ಅಧ್ಯಕ್ಷ ನಾಗೇಶ್ ಬಿಲ್ಲವ ಹಾಗೂ ವಿವಿಧ ಇಲಾಖೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.