ಲೈಂಗಿಕ ದೌರ್ಜನ್ಯ ಪ್ರಕರಣ ಹಿಂದೆಗೆಯಲು ಬಲವಂತ: ವಿದ್ಯಾರ್ಥಿನಿಯ ಹತ್ಯೆ
Update: 2018-08-21 21:47 IST
ಸಿಯೋನಿ (ಮಧ್ಯಪ್ರದೇಶ), ಆ. 21: ಲೈಂಗಿಕ ದೌರ್ಜನ್ಯ ಆರೋಪ ಹಾಗೂ ದಾಖಲಿಸಲಾದ ಪ್ರಕರಣ ಹಿಂದೆಗೆದುಕೊಳ್ಳು ವಂತೆ ಒತ್ತಾಯಿಸಿ 23 ವರ್ಷದ ಯುವತಿಯನ್ನು ಹಾಡುಹಗಲೇ ಹತ್ಯೆಗೈದ ಘಟನೆ ಸಿಯೋನಿಯಲ್ಲಿ ಸೋಮವಾರ ನಡೆದಿದೆ.
ಯುವತಿ ಕಾಲೇಜಿಗೆ ತೆರಳುತ್ತಿದ್ದಾಗ ಸಿಯೋನಿಯಲ್ಲಿ ಆರೋಪಿ ಅನಿಲ್ ಮಿಶ್ರಾ ಆಕೆಯ ಕೂದಲು ಹಿಡಿದು ಎಳೆದೊಯ್ದ. ಅನಂತರ ತಲೆಯನ್ನು ಕಲ್ಲೊಂದಕ್ಕೆ ಢಿಕ್ಕಿ ಹೊಡೆಸಿದ್ದಾನೆ. ಗಂಭೀರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದರು. ತನ್ನ ವಿರುದ್ಧ ಸಲ್ಲಿಸಲಾದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಹಿಂದೆಗೆದುಕೊಳ್ಳುವಂತೆ ಆರೋಪಿ ಅನಿಲ್ ಮಿಶ್ರ ಯುವತಿಯನ್ನು ಬಲವಂತ ಮಾಡುತ್ತಿದ್ದ. ಇಬ್ಬರೂ ಒಂದು ಗ್ರಾಮದವರು. ಯುವತಿ ಶಿಕ್ಷಣ ಪಡೆಯುತ್ತಿದ್ದ ನೇತಾಜಿ ಸುಭಾಶ್‌ಚಂದ್ರ ಬೋಸ್ ಕಾಲೇಜಿನ ಸಮೀಪ ಮಧ್ಯಾಹ್ನ ಈ ಪೈಶಾಚಿಕ ಘಟನೆ ನಡೆದಿದೆ.