×
Ad

ಮಣಿಪಾಲ: ಮಾಹೆಯಿಂದ ರಾ.ಯುವ ಸಮ್ಮೇಳನ

Update: 2018-08-21 22:00 IST

ಮಣಿಪಾಲ, ಆ.21: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಸಹಯೋಗದೊಂದಿಗೆ ಎರಡನೇ ಯುವ ಸಮ್ಮೇಳನವನ್ನು ಆ.25 ಮತ್ತು 26ರಂದು ಮಣಿಪಾಲದಲ್ಲಿ ಆಯೋಜಿಸಿದೆ ಎಂದು ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಬದಲಾವಣೆಯಲ್ಲಿ ಯುವಕರು’ ವಿಷಯದ ಮೇಲೆ ನಡೆಯುವ ಈ ಯುವ ಸಮ್ಮೇಳನವನ್ನು ಮಣಿಪಾಲ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆ.25ರ ಸಂಜೆ 5:30ಕ್ಕೆ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸಲಿದ್ದಾರೆ.

ದೇಶದ ಸುಮಾರು 60ಕ್ಕೂ ಅಧಿಕ ಸಂಸ್ಥೆಗಳ 700ಕ್ಕೂ ಅಧಿಕ ವಿದ್ಯಾರ್ಥಿ ಪ್ರತಿನಿಧಿಗಳು ಎರಡು ದಿನಗಳ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ತಿಳಿಸಿದರು. ಸಾಮಾಜಿಕ ಉದ್ದಿಮೆದಾರರು, ಕಾರ್ಪೋರೇಟ್ಸ್, ಯುವ ಐಕಾನ್‌ಗಳು, ಸರಕಾರೇತರ ಸಂಸ್ಥೆಗಳು ಪ್ರಮುಖರು ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನದ ಸಂಚಾಲಕ ಡಾ.ಅನುಪ್ ನಾಹಾ ಮಾತನಾಡಿ, ಮಾಹೆಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನೊಳಗೊಂಡ ಸ್ವಯಂಸೇವಕ ಸೇವಾ ಸಂಸ್ಥೆ (ವಿಎಸ್‌ಒ) ಈ ಸಮಾವೇಶವನ್ನು ಆಯೋಜಿಸುವಲ್ಲಿ ಮುತುವರ್ಜಿ ವಹಿಸಿದೆ. ಸಮಾಜದ ಒಳಿತಿಗಾಗಿ ಲೋಕೋಪಕಾರದ ಹಾಗೂ ಮಾನವ ಪ್ರೇಮವನ್ನು ಬೆಳೆಸಲು ವಿದ್ಯಾರ್ಥಿಗಳು ಸಜ್ಜುಗೊಳಿಸುವುದು ಇದರ ಗುರಿಯಾಗಿದೆ ಎಂದರು.

ಇದೇ ಅ.2ರಿಂದ 8ರವರೆಗೆ ಮಾಹೆಯಲ್ಲಿ ನಡೆಯುವ ‘ದಾನ್ ಉತ್ಸವ’ಕ್ಕೆ ಪೂರ್ವಭಾವಿಯಾಗಿ ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು. ಈ ಸಮ್ಮೇಳನ ಶಿಕ್ಷಣ, ಆಡಳಿತ ಹಾಗೂ ಪರಿಸರದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆ.26ರಂದು ಮಣಿಪಾಲ ಸೇವಾ ಮೇಳ ನಡೆಯಲಿದೆ ಎಂದು ಸಹ ಸಂಚಾಲಕ ಅಭಿಷೇಕ್ ಚರ್ತುವೇದಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News