ಮಿನಾದಲ್ಲಿ ಸೈತಾನನಿಗೆ ಕಲ್ಲೆಸೆದ ಯಾತ್ರಿಕರು

Update: 2018-08-21 17:05 GMT

ಜಿದ್ದಾ (ಸೌದಿ ಅರೇಬಿಯ), ಆ. 21: ಸೌದಿ ಅರೇಬಿಯದ ಪವಿತ್ರ ನಗರ ಮಕ್ಕಾದಲ್ಲಿರುವ ಮಿನಾದಲ್ಲಿ ಹಜ್ ಯಾತ್ರೆಯ ಎರಡನೇ ದಿನದ ವಿಧಿ ವಿಧಾನಗಳನ್ನು ಲಕ್ಷಾಂತರ ಯಾತ್ರಿಕರು ಮಂಗಳವಾರ ಆಚರಿಸಿದ್ದಾರೆ.

 ಅರಫಾತ್ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ, ಹಿಂದಿನ (ಸೋಮವಾರ) ರಾತ್ರಿ ಯಾತ್ರಿಕರು ಮುಝ್ದಲಿಫದಲ್ಲಿ ಶಿಬಿರಗಳಲ್ಲಿ ಕಳೆದಿದ್ದರು.

ಪ್ರವಾದಿ ಮುಹಮ್ಮದರು ಅರಫಾತ್ ಪರ್ವತದಲ್ಲಿ ತನ್ನ ಕೊನೆಯ ಪ್ರವಚನವನ್ನು ನೀಡಿದ್ದರು ಎಂಬ ನಂಬಿಕೆಯಿದೆ.

ಮಂಗಳವಾರ ಸುಮಾರು 24 ಲಕ್ಷ ಯಾತ್ರಿಕರು ಮಿನಾಕ್ಕೆ ತೆರಳಿದ್ದಾರೆ. ಅಲ್ಲಿ ಮೂರು ಕಂಬಗಳಿಗೆ ಕಲ್ಲೆಸೆಯುವ ವಿಧಿಯನ್ನು ಪೂರೈಸಿದ್ದಾರೆ.

ಈ ಮೂರು ಕಂಬಗಳು ಸೈತಾನನ್ನು ಪ್ರತಿನಿಧಿಸುತ್ತವೆ. ಇಲ್ಲಿ ಭಕ್ತರು 3 ಕಲ್ಲುಗಳನ್ನು ಎಸೆಯುತ್ತಾರೆ. ಯಾತ್ರಿಕರ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ, ಅವರ ಸುಗಮ ಸಂಚಾರಕ್ಕೆ ಮಿನಾದಲ್ಲಿ ಹಲವು ಪದರಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಒಂದು ಮಾರ್ಗವು ಭಕ್ತರನ್ನು 3 ಕಂಬಗಳತ್ತ ಒಯ್ದರೆ, ಇನ್ನೊಂದು ಮಾರ್ಗವು ಅಲ್ಲಿಂದ ಹೊರಗೊಯ್ಯುತ್ತದೆ.

ಹಜ್ ಉಸ್ತುವಾರಿಗಾಗಿ ದೊರೆ ಸಲ್ಮಾನ್ ಮಿನಾಗೆ ಆಗಮನ

ಹಜ್ ಯಾತ್ರೆಯ ಸಂದರ್ಭದಲ್ಲಿ ಒದಗಿಸಲಾಗಿರುವ ಸೇವೆಗಳ ಉಸ್ತುವಾರಿ ನೋಡಿಕೊಳ್ಳಲು ಸೌದಿ ಅರೇಬಿಯದ ದೊರೆ ಸಲ್ಮಾನ್ ಸೋಮವಾರ ಮಕ್ಕಾದ ಮಿನಾಕ್ಕೆ ಆಗಮಿಸಿದ್ದಾರೆ.

 ಇಸ್ಲಾಮ್‌ನ ಎರಡು ಅತ್ಯಂತ ಪವಿತ್ರ ಮಸೀದಿಗಳ ಉಸ್ತುವಾರಿಯಾಗಿರುವ ದೊರೆ ಸಲ್ಮಾನ್, ಯಾತ್ರಿಕರ ಸೌಲಭ್ಯಗಳ ಮೇಲೆ ನಿಗಾ ಇಡಲು ಹಾಗೂ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ನೀಡುತ್ತಿರುವ ಸೇವೆಗಳು ಯಾತ್ರಿಕರ ಅಗತ್ಯಗಳನ್ನು ಪೂರೈಸುತ್ತಿವೆಯೇ ಹಾಗೂ ಅವರು ಸುರಕ್ಷಿತವಾಗಿ ಹಜ್ ವಿಧಿವಿಧಾನಗಳನ್ನು ಪೂರೈಸಲು ಸಹಾಯಕವಾಗಿದೆಯೇ ಎಂಬುದನ್ನು ನೋಡಲು ಇಲ್ಲಿಗೆ ಆಗಮಿಸಿದ್ದಾರೆ ಎಂದು ಸೌದಿ ಪ್ರೆಸ್ ಏಜನ್ಸಿ ತಿಳಿಸಿದೆ.

ಆಂತರಿಕ ಸಚಿವ ರಾಜಕುಮಾರ ಅಬ್ದುಲಝೀಝ್ ಬಿನ್ ಸೌದ್ ಬಿನ್ ನಯೀಫ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ದೊರೆ ಸಲ್ಮಾನ್ ಜೊತೆ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News