ಇರಾನ್: ಸಂಪೂರ್ಣ ದೇಶಿ ನಿರ್ಮಿತ ಯುದ್ಧವಿಮಾನ ಅನಾವರಣ

Update: 2018-08-21 17:08 GMT
ಸಾಂದರ್ಭಿಕ ಚಿತ್ರ

ಟೆಹರಾನ್, ಆ. 21: ಟೆಹರಾನ್‌ನಲ್ಲಿ ಮಂಗಳವಾರ ನಡೆದ ರಕ್ಷಣಾ ಸಾಮಗ್ರಿಗಳ ಪ್ರದರ್ಶನವೊಂದರಲ್ಲಿ ಇರಾನ್ ತನ್ನ ಪ್ರಥಮ ದೇಶಿ ಯುದ್ಧ ವಿಮಾನವನ್ನು ಅನಾವರಣಗೊಳಿಸಿದೆ.

ರಾಷ್ಟ್ರೀಯ ರಕ್ಷಣೋದ್ಯಮ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ನೂತನ ‘ಕೊಸ್ವಾರ್’ ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ಅಧ್ಯಕ್ಷ ಹಸನ್ ರೂಹಾನಿ ಕುಳಿತಿರುವ ಚಿತ್ರಗಳನ್ನು ಸರಕಾರಿ ಟೆಲಿವಿಶನ್ ಪ್ರಸಾರಮಾಡಿದೆ.

ಇದು ಸುಧಾರಿತ ವೈಮಾನಿಕ ತಂತ್ರಜ್ಞಾನವನ್ನು ಒಳಗೊಂಡ ನಾಲ್ಕನೇ ತಲೆಮಾರಿನ ಯುದ್ಧವಿಮಾನವಾಗಿದೆ ಎಂದು ‘ತಸ್ನೀಮ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವಿಮಾನವನ್ನು 100 ಶೇಕಡ ಸ್ವದೇಶದಲ್ಲೇ ನಿರ್ಮಿಸಲಾಗಿದೆ ಎಂದು ಅದು ಹೇಳಿದೆ.

ವಿಮಾನದ ಹಾರಾಟ ಪರೀಕ್ಷೆಯನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಅದು ತಿಳಿಸಿದೆ.

1980ರ ದಶಕದಲ್ಲಿ ಇರಾಕ್‌ನೊಂದಿಗೆ ನಡೆದ 8 ವರ್ಷಗಳ ಯುದ್ಧದ ಅವಧಿಯಲ್ಲಿ ತಾನು ಅನುಭವಿಸಿದ ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ ಇರಾನ್ ರಕ್ಷಣಾ ಕಾರ್ಯಕ್ರಮವನ್ನು ರೂಪಿಸಿದೆ ಎಂದು ರಕ್ಷಣಾ ಸಚಿವ ಅಮೀರ್ ಹಟಾಮಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News