ವಿದೇಶಿ ಕೇಂದ್ರಿತ ಉಗ್ರ ಗುಂಪುಗಳ ವಿರುದ್ಧ ಕ್ರಮ: ಪಾಕಿಸ್ತಾನಕ್ಕೆ ಅಮೆರಿಕ ಆಗ್ರಹ

Update: 2018-08-21 17:13 GMT

ವಾಶಿಂಗ್ಟನ್, ಆ. 21: ಅಮೆರಿಕ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಯಲ್ಲಿ ಭಯೋತ್ಪಾದನೆಯೇ ಪ್ರಮುಖ ವಿಷಯವಾಗಿದೆ ಎಂಬ ಇಂಗಿತವನ್ನು ಅಮೆರಿಕ ವ್ಯಕ್ತಪಡಿಸಿದೆ.

ಪಾಕಿಸ್ತಾನದಲ್ಲಿ ನೆಲೆ ಹೊಂದಿ, ವಿದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಗುಂಪುಗಳನ್ನು ನಿಗ್ರಹಿಸಲು ಪಾಕಿಸ್ತಾನವು ಇನ್ನಷ್ಟು ಹೆಚ್ಚಿನ ಪ್ರಯತ್ನಗಳನ್ನು ನಡೆಸುವುದೆಂದು ಅಮೆರಿಕ ನಿರೀಕ್ಷಿಸಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಶ್ಯ ಬ್ಯೂರೋ ಮುಖ್ಯಸ್ಥೆ ಆ್ಯಲಿಸ್ ವೆಲ್ಸ್ ಹೇಳಿದ್ದಾರೆ.

 ‘‘ಭಯೋತ್ಪಾದಕ ಗುಂಪುಗಳು ನಕಲಿ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸುತ್ತಿರುವ ಬಗ್ಗೆ ಹಾಗೂ ಸುರಕ್ಷಿತ ಆಶ್ರಯ ತಾಣಗಳನ್ನು ಪಡೆಯುತ್ತಿರುವ ಬಗ್ಗೆ ನಾವು ನಮ್ಮ ಕಳವಳ ವ್ಯಕ್ತಪಡಿಸಿದ್ದೇವೆ. ಈ ಗುಂಪುಗಳ ವಿರುದ್ಧ ಹೆಚ್ಚಿನ ಒತ್ತಡ ತರುವಂತೆ ನಾವು ಅಲ್ಲಿನ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ’’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.

ಅಫ್ಘಾನ್ ತಾಲಿಬಾನ್ ಜೊತೆ ನಂಟು ಹೊಂದಿರುವ ಹಾಗೂ ಪಾಕಿಸ್ತಾನದ ಸುರಕ್ಷಿತ ಆಶ್ರಯ ತಾಣಗಳಿಂದ ಚಟುವಟಿಕೆಗಳನ್ನು ನಡೆಸುತ್ತಿರುವ ಹಕ್ಕಾನಿ ನೆಟ್‌ವರ್ಕ್ ಎಂಬ ಭಯೋತ್ಪಾದಕ ಗುಂಪಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಈ ರೀತಿಯಾಗಿ ಉತ್ತರಿಸಿದರು.

‘ವಿದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವ’ ಭಯೋತ್ಪಾದಕ ಗುಂಪುಗಳು ಎಂಬುದಾಗಿ ಅವರು ಪ್ರಸ್ತಾಪಿಸಿದ್ದು, ಇದರ ವ್ಯಾಪ್ತಿಯಲ್ಲಿ ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಗಳೂ ಬರುತ್ತವೆ. ಈ ಎರಡು ಭಯೋತ್ಪಾದಕ ಗುಂಪುಗಳು ಭಾರತವನ್ನು ಗುರಿಯಾಗಿಸಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News