ಸಿಧು ಶಾಂತಿಯ ರಾಯಭಾರಿ: ಮಾಜಿ ಕ್ರಿಕೆಟಿಗನ ರಕ್ಷಣೆಗೆ ಧಾವಿಸಿದ ಪಾಕ್ ಪ್ರಧಾನಿ

Update: 2018-08-21 17:15 GMT

ಇಸ್ಲಾಮಾಬಾದ್, ಆ. 21: ತನ್ನ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ವಿವಾದಕ್ಕೆ ಒಳಗಾಗಿರುವ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ರಕ್ಷಣೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಧಾವಿಸಿದ್ದಾರೆ.

ಸಿಧುರನ್ನು ಟೀಕಿಸುವವರು ಈ ಉಪಖಂಡದ ಶಾಂತಿಗೆ ವಿರುದ್ಧವಾಗಿದ್ದಾರೆ ಎಂದು ಇಮ್ರಾನ್ ಬಣ್ಣಿಸಿದ್ದಾರೆ.

ಆಗಸ್ಟ್ 18ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಇಮ್ರಾನ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸಿಧು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವರನ್ನು ಆಲಿಂಗಿಸಿದ್ದರು. ಇದಕ್ಕಾಗಿ ಪ್ರತಿಪಕ್ಷಗಳು ಅವರನ್ನು ಟೀಕಿಸಿದ್ದವು. ಸ್ವತಃ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಲು ಸಿಧು ಮಂಗಳವಾರ ಚಂಡೀಗಢದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು.

ಅವರ ಪತ್ರಿಕಾಗೋಷ್ಠಿಯ ಬಳಿಕ ಟ್ವೀಟ್ ಮಾಡಿದ ಇಮ್ರಾನ್, ‘‘ನನ್ನ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಬಂದಿರುವುದಕ್ಕಾಗಿ ನಾನು ಸಿಧುಗೆ ಧನ್ಯವಾದ ಸಲ್ಲಿಸುತ್ತೇನೆ. ಅವರು ಶಾಂತಿಯ ರಾಯಭಾರಿಯಾಗಿದ್ದಾರೆ. ಅವರಿಗೆ ಪಾಕಿಸ್ತಾನದ ಜನತೆ ಅಮೋಘ ಪ್ರೀತಿಯನ್ನು ಕೊಟ್ಟಿದ್ದಾರೆ’’ ಎಂದು ಹೇಳಿದ್ದಾರೆ.

‘‘ಭಾರತದಲ್ಲಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವವರು ಉಪಖಂಡದಲ್ಲಿನ ಶಾಂತಿಗೆ ವಿರುದ್ಧವಾಗಿದ್ದಾರೆ. ಶಾಂತಿಯಿಲ್ಲದೆ ನಮ್ಮ ಜನರು ಅಭಿವೃದ್ಧಿ ಹೊಂದಲಾರರು’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News