ಭಾರತದಲ್ಲಿ ತನ್ನ ಮೊದಲ ಬಲಿಯನ್ನು ಪಡೆದ ‘ಮೊಮೊ ಚಾಲೆಂಜ್ ’

Update: 2018-08-22 08:27 GMT

ಅಜ್ಮೀರ್(ರಾಜಸ್ಥಾನ),ಆ.22: ವಿಶ್ವಾದ್ಯಂತ ಹಲವಾರು ಜೀವಗಳನ್ನು ಬಲಿ ಪಡೆದಿರುವ ಬ್ಲೂವೇಲ್ ಚಾಲೆಂಜ್‌ನ ಹೆಜ್ಜೆಗಳಲ್ಲಿಯೇ ಸಾಗುತ್ತಿರುವ ಅಪಾಯಕಾರಿಯಾದ ಆನ್‌ಲೈನ್ ಆಟ ಮೊಮೊ ಚಾಲೆಂಜ್ ಭಾರತದಲ್ಲಿ ತನ್ನ ಮೊದಲ ಬಲಿಯನ್ನು ತೆಗೆದುಕೊಂಡಿರುವಂತಿದೆ. ಅಜ್ಮೀರ್‌ನ 16ರ ಹರೆಯದ 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ತನ್ನ ಮಣಿಗಂಟುಗಳನ್ನು ಕತ್ತರಿಸಿಕೊಂಡ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಮ್ಮ ಪುತ್ರಿಯ ಸಾವಿನಲ್ಲಿ ಆನ್‌ಲೈನ್ ಆಟದ ಕೈವಾಡದ ಬಗ್ಗೆ ವಿಚಾರಣೆ ನಡೆಸುವಂತೆ ಹೆತ್ತವರು ಆಗ್ರಹಿಸಿದ್ದು,ಮೊಮೊ ಚಾಲೆಂಜ್‌ನ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆನ್‌ಲೈನ್ ಆಟದ ಅಂತಿಮ ಹಂತವನ್ನು ತಲುಪಿದ್ದಕ್ಕೆ ವಿದ್ಯಾರ್ಥಿನಿ ತುಂಬ ಸಂಭ್ರಮದಲ್ಲಿದ್ದಳು ಎಂದು ಆಕೆಯ ಸ್ನೇಹಿತರಲ್ಲೋರ್ವ ಆಕೆಯ ಸೋದರನಿಗೆ ತಿಳಿಸಿದ್ದಾನೆ. ಆಕೆ ಶಾಲೆಯಲ್ಲಿ ಬಿಡುವಿನ ಸಮಯದಲ್ಲಿ ಮತ್ತು ಊಟದ ಸಂದರ್ಭದಲ್ಲಿ ಆನ್‌ಲೈನ್ ಆಟದಲ್ಲಿ ಮುಳುಗಿರುತ್ತಿದ್ದಳು ಎಂದೂ ಆತ ಹೇಳಿದ್ದಾನೆ.

ಬಾಲಕಿ ಆತ್ಮಹತ್ಯೆ ಚೀಟಿಯೊಂದನ್ನು ಬಿಟ್ಟಿದ್ದು,ಕಡಿಮೆ ಅಂಕಗಳಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಸಾವಿನಲ್ಲಿ ಮೊಮೊ ಚಾಲೆಂಜ್‌ನ ಪಾತ್ರವಿತ್ತೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಪೊಲೀಸರು ಆಕೆಯ ಇಂಟರ್ನೆಟ್ ಹಿಸ್ಟರಿ ಮತ್ತು ವೈಯಕ್ತಿಕ ವಸ್ತುಗಳನ್ನು ಜಾಲಾಡುತ್ತಿದ್ದಾರೆ.

ಅಮೆರಿಕಾ,ಅರ್ಜೆಂಟಿನಾ,ಫ್ರಾನ್ಸ್,ಮೆಕ್ಸಿಕೊ ಮತ್ತು ಜರ್ಮನಿ ಸೇರಿದಂತೆ ಹಲವಾರು ದೇಶಗಳಲ್ಲಿ ಮೊಮೊ ಚಾಲೆಂಜ್ ಹಾವಳಿಯನ್ನೆಬ್ಬಿಸಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಅಜೆಂಟಿನಾದ 12ರ ಹರೆಯದ ಬಾಲಕಿಯೋರ್ವಳು ಈ ಅಪಾಯಕಾರಿ ಆಟದ ಮೊದಲ ಬಲಿಯಾಗಿದ್ದಳು.

ಕಣ್ಣುಗುಡ್ಡೆಗಳು ಹೊರಬಂದಿರುವ,ಬೆನ್ನುಹುರಿಯಲ್ಲಿ ಚಳಿಯನ್ನು ಹುಟ್ಟಿಸುವ ಮಹಿಳೆಯ ಚಿತ್ರದ ಸಂಕೇತವನ್ನು ಹೊಂದಿರುವ ಮೆಮೊ ಚಾಲೆಂಜ್ ಬ್ಲೂವೇಲ್ ಚಾಲೆಂಜ್‌ಗಿಂತಲೂ ಹೆಚ್ಚಿನ ಜೀವಗಳನ್ನು ಬಲಿ ತೆಗೆದುಕೊಳ್ಳುವ ಸಾಧ್ಯತೆಗಳು ಬಲವಾಗಿವೆ.

ಮೊಮೊ ಚಾಲೆಂಜ್ ಆಡುವವರಿಗೆ ಅಪರಿಚಿತ ವ್ಯಕ್ತಿಯೋರ್ವ ಸೂಚನೆಗಳನ್ನು ನೀಡುತ್ತಾನೆ,ಜೊತೆಗೆ ಅವರಲ್ಲಿ ತಲ್ಲಣಗಳನ್ನುಂಟು ಮಾಡುವ ಆಡಿಯೊ ಮತ್ತು ವೀಡಿಯೊ ಕ್ಲಿಪ್‌ಗಳನ್ನು ರವಾನಿಸುತ್ತಾನೆ. ಆತನ ಸೂಚನೆಗಳಂತೆ ಆಟವನ್ನು ಮುಂದುವರಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News