ಮಾಧ್ಯಮ ಸೆನ್ಸಾರ್ ರದ್ದುಗೊಳಿಸಿದ ಪಾಕ್ ಸರ್ಕಾರ

Update: 2018-08-22 11:34 GMT

ಇಸ್ಲಾಮಾಬಾದ್, ಆ. 22: ನೂತನ ಪ್ರಧಾನಿ ಇಮ್ರಾನ್‌ಖಾನ್ ನೇತೃತ್ವದ ಪಿಟಿಐ ಸರ್ಕಾರ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಗಳ ಮೇಲೆ ಇದ್ದ ರಾಜಕೀಯ ಸೆನ್ಸಾರ್‌ಶಿಪ್ ರದ್ದುಪಡಿಸಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಹುಸೇನ್ ಚೌಧರಿ ಪ್ರಕಟಿಸಿದ್ದಾರೆ.

ಪಾಕಿಸ್ತಾನ ಟೆಲಿವಿಷನ್ (ಪಿಟಿವಿ) ಮತ್ತು ರೇಡಿಯೊ ಪಾಕಿಸ್ತಾನ ಇದೀಗ ಸಂಪೂರ್ಣ ಸಂಪಾದಕೀಯ ಸ್ವಾತಂತ್ರ್ಯ ಪಡೆದಿದ್ದು, ಇವುಗಳು ಮುಕ್ತವಾಗಿ ಕಾರ್ಯಕ್ರಮಗಳನ್ನು ಸಿದ್ಧಪಡಿಸಬಹುದಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

"ಇಮ್ರಾನ್‌ಖಾನ್ ಅವರ ದೂರದೃಷ್ಟಿಯ ಫಲವಾಗಿ ಪಿಟಿಐ ರಾಜಕೀಯ ಸೆನ್ಸಾರ್‌ಶಿಪ್ ಅಂತ್ಯಗೊಳಿಸಿದೆ. ಪಿಟಿವಿ ಹಾಗೂ ರೇಡಿಯೊ ಪಾಕಿಸ್ತಾನಕ್ಕೆ ಸಂಪೂರ್ಣ ಸಂಪಾದಕೀಯ ಸ್ವಾತಂತ್ರ್ಯ ನೀಡುವ ಸೂಚನೆ ಹೊರಡಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಮಾಹಿತಿ ಸಚಿವಾಲಯದಲ್ಲಿ ಗಣನೀಯ ಬದಲಾವಣೆಗಳು ಕಾಣಿಸಲಿವೆ" ಎಂದು ವಿವರಿಸಿದ್ದಾರೆ.

ನೂತನ ಪ್ರಧಾನಿ ಹಾಗೂ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖಂಡ ಜುಲೈ 25ರ ಚುನಾವಣೆ ಬಳಿಕ ಮಾಡಿದ ತಮ್ಮ ಮೊಟ್ಟಮೊದಲ ಭಾಷಣದಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ವಿಸ್ತತ ಸುಧಾರಣೆಗಳನ್ನು ತರುವ ಉದ್ದೇಶವನ್ನು ಪ್ರಕಟಿಸಿದ್ದರು. ಅವುಗಳನ್ನು ಸ್ವತಂತ್ರ್ಯ ಮತ್ತು ರಾಜಕೀಯ ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಸುಳಿವು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News