ಕೇರಳ ಪ್ರವಾಹ: ತಿರುವನಂತಪುರದಲ್ಲಿ ಈ ಬಾರಿ ಬಕ್ರೀದ್ ಇಲ್ಲ
ತಿರುವನಂತಪುರ,ಆ.22: ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಕೇರಳ ಇನ್ನೂ ಚೇತರಿಸಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಬುಧವಾರ ತಿರುವನಂತಪುರದಲ್ಲಿ ಬಕ್ರೀದ್ ಆಚರಿಸಲಿಲ್ಲ.
ಆಕರ್ಷಕ ಪಾಲಯಂ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಿಸಲು ಸಾವಿರಾರು ಮಂದಿ ಪ್ರತಿ ವರ್ಷ ಸೇರುತ್ತಾರೆ. ಆದರೆ ಈ ಬಾರಿ ಮಸೀದಿಯಲ್ಲಿ ಯಾವುದೇ ಸಡಗರ ಸಂಭ್ರಮವಿಲ್ಲದೇ ಮಂಕು ಕವಿದಿತ್ತು.
ಮುಂಜಾನೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರವಾಹದಿಂದ ತೊಂದರೆಗೀಡಾದ ಜನ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕೋರಿದರು. ಪಾಲಯಂ ಮಸೀದಿಯ ಮುಖ್ಯಸ್ಥ ವಿ.ಪಿ.ಸುಹೈಬ್ ಮಾತನಾಡಿ, "ಭೀಕರ ಪ್ರವಾಹದಿಂದ ರಾಜ್ಯ ಇನ್ನೂ ಚೇತರಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ ಈದ್ ಆಚರಿಸದಿರಲು ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಂಡಿದ್ದೇನೆ" ಎಂದು ಹೇಳಿದರು.
"ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರವಾಹದಿಂದ ಹಾನಿಗೀಡಾಗಿರುವವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆವು. ನಾವು ಒಗ್ಗಟ್ಟಾಗಿರಬೇಕು ಎಂಬ ಪಾಠವನ್ನು ನಮಗೆ ಈ ಭೀಕರ ಪ್ರವಾಹ ಕಲಿಸಿದೆ" ಎಂದು ಹೇಳಿದರು.
ಕಳೆದ ಒಂದು ವಾರದಿಂದ ಮಸೀದಿ ದೇಣಿಗೆ ಕೇಂದ್ರವಾಗಿದೆ. ಪರಿಹಾರ ಸಾಮಗ್ರಿಗಳನ್ನು ಮತ್ತು ಅಗತ್ಯ ಬಟ್ಟೆ ಬರೆಯನ್ನು ನಾವು ನೀಡಿದ್ದೇವೆ ಎಂದು ವಿವರಿಸಿದ್ದಾರೆ.