ಸುದರ್ಶನ್ ಜೈನ್ ಕೊಲೆ ಪ್ರಕರಣ: ಆರೋಪಿಗಳ ಬಂಧನ

Update: 2018-08-22 16:29 GMT

ಮೂಡುಬಿದಿರೆ, ಅ.22: ಸ್ನೇಹಿತರೊಂದಿಗೆ ಸೇರಿ ಆಗಸ್ಟ್ 11ರಂದು ರಾತ್ರಿ ಹೊಸಬೆಟ್ಟುನಲ್ಲಿ ಅಣ್ಣನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೃತರ ತಮ್ಮ ಸೇರಿದಂತೆ ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.

ಹೊಸಬೆಟ್ಟು ಗ್ರಾಮದ  ಸುಧೀರ್ ಜೈನ್(26), ಹೊಕ್ಕಾಡಿಗೋಳಿಯ ಸಂದೀಪ್ ಶೆಟ್ಟಿ(29) ಹಾಗೂ ವೇಣೂರು ಆರಂಬೋಡಿಯ ಬಾಲರಾಜ್(23)ಬಂಧಿತ ಆರೋಪಿಗಳು. ಆರೋಪಿಗಳನ್ನು ಇಲ್ಲಿನ ಕೋರ್ಟ್‌ಗೆ ಹಾಜರುಪಡಿಸಿದಾಗ ಆ. 27ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

 ಬಟ್ಟೆ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದ ಸುದರ್ಶನ್ ಜೈನ್(28) ಎಂದಿನಂತೆ ಆ. 11ರಂದು ರಾತ್ರಿ ಕೆಲಸ ಮುಗಿಸಿ ತನ್ನ ತಮ್ಮ ಸುಧೀರ್ ಜೈನ್ ಜತೆ ಬೈಕ್‌ನಲ್ಲಿ ಮನೆಗೆ ಹೊರಟಿದ್ದರು. ಮನೆ ತಲುಪಲು ಸ್ವಲ್ಪ ದೂರದಲ್ಲಿರುವಾಗ ಬೈಕ್ ಕೆಟ್ಟು ಹೋಗಿದೆ ಎಂದು ನೆಪವೊಡ್ಡಿ ತಮ್ಮ ಬೈಕ್ ನಿಲ್ಲಿಸಿದ್ದು, ಬೈಕನ್ನು ಅಲ್ಲೆ ಬಿಟ್ಟು ಸುಧೀರ್ ಅಣ್ಣನನ್ನು ಎದುರಿನಲ್ಲಿ ನಿಂತಿದ್ದ ಕಾರಿನೊಳಗೆ ಕರೆದುಕೊಂಡು ಹೋದ. ಅದರೊಳಗೆ ಸುಧೀರ್‌ನ ಸ್ನೇಹಿತರು ಕುಳಿತಿದ್ದರು. ಕಾರನ್ನು ಬೇರೆಡೆಗೆ ಕೊಂಡೊಯ್ದ ಆರೋಪಿಗಳು ಸುದರ್ಶನ್‌ಗೆ ಮಾರಕಾಯುಧದಿಂದ ಇರಿದು ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಬಳಿಕ ಶವವನ್ನು ಪುಚ್ಚೆಮೊಗರಿನ ಪಲ್ಗುಣಿಗೆ ನದಿಗೆ ಎಸೆದು ಪರಾರಿಯಾಗಿದ್ದರು. ಆ. 17ಕ್ಕೆ ಸುದರ್ಶನ್‌ನ ಶವ ಮರವೂರು ಡ್ಯಾಂನಲ್ಲಿ ಪತ್ತೆಯಾಗಿತ್ತು.

ಸುಧೀರ್ ಸಿದ್ಧಕಟ್ಟೆಯಲ್ಲಿ ಅಂಗಡಿಯನ್ನು ಹೊಂದಿದ್ದು ಇನ್ನೋರ್ವ ಆರೋಪಿ ಸಂದೀಪ್ ಶೆಟ್ಟಿ ಈತನ ಅಂಗಡಿಯಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದರೆ ಮತ್ತೋರ್ವ ಆರೋಪಿ ಬಾಲ್‌ರಾಜ್ ಸುಧೀರ್‌ನ ಸ್ನೇಹಿತ. ಮನೆಯ ಆಸ್ತಿ ಮಾರಾಟದಲ್ಲಿ ಸುಧೀರ್ ಮತ್ತು ಸುದರ್ಶನ್‌ಗೆ ತಲಾ ರೂ 6 ಲಕ್ಷ ಹಣ ಸಿಕ್ಕಿತ್ತು. ಸಹೋದರ ಸುದರ್ಶನ್‌ಗೆ ಸಿಕ್ಕ ಹಣವನ್ನು ತನಗೆ ಕೊಡದ ಸಿಟ್ಟಿಗೆ ಆತನನ್ನು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News