ತೆಂಗಿನೆಣ್ಣೆ ಅತ್ಯಂತ ಕೆಟ್ಟದ್ದು ಮತ್ತು 'ಶುದ್ಧ ವಿಷ': ಹಾರ್ವರ್ಡ್ ಪ್ರೊಫೆಸರ್

Update: 2018-08-23 08:32 GMT

ಹೊಸದಿಲ್ಲಿ, ಆ.23: ತೆಂಗಿನೆಣ್ಣೆಯನ್ನು ಸೇವಿಸುವುದು ಅತ್ಯಂತ ಕೆಟ್ಟದ್ದು ಹಾಗೂ ಅದು `ಶುದ್ಧ ವಿಷ' ಎಂದು ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಇಲ್ಲಿನ ಪ್ರೊಫೆಸರ್ ಕೆರಿನ್ ಮಿಶೆಲ್ಸ್ ಹೇಳಿಕೊಂಡಿದ್ದಾರೆ. ಆಕೆ ಈ ಬಗ್ಗೆ ಹೇಳಿಕೊಂಡ ವೀಡಿಯೋ ಯುಟ್ಯೂಬ್ ನಲ್ಲಿ ವೈರಲ್ ಆಗಿದ್ದು ಬುಧವಾರದ ತನಕ 10 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.

“ತೆಂಗಿನೆಣ್ಣೆ ಬಗ್ಗೆ ನಾನು ನಿಮ್ಮನ್ನು ಕೇವಲ ಎಚ್ಚರಿಸಬಲ್ಲೆ. ಇದು ನೀವು ತಿನ್ನಬಹುದಾದ ಅತ್ಯಂತ ಕೆಟ್ಟ ಆಹಾರ'' ಎಂದು ಅವರು ಹೇಳಿದ್ದಾರೆ. ಅವರ  ಈ ವೀಡಿಯೋ ಜರ್ಮನ್ ಭಾಷೆಯಲ್ಲಿದ್ದು “ತೆಂಗಿನೆಣ್ಣೆ ಮತ್ತು ಇತರ ಪೌಷ್ಠಿಕಾಂಶ ದೋಷಗಳು” ಎಂಬ ಶೀರ್ಷಿಕೆಯನ್ನು ಅದಕ್ಕೆ ನೀಡಲಾಗಿದೆ. ಇಡೀ ವೀಡಿಯೊದಲ್ಲಿ ಆಕೆ ಕನಿಷ್ಠ ಮೂರು ಬಾರಿ ‘ತೆಂಗಿನೆಣ್ಣೆ ಶುದ್ಧ ವಿಷ’ ಎಂದು ಹೇಳಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಮಿಶೆಲ್ಸ್ ಪ್ರಕಾರ ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ತೆಂಗಿನೆಣ್ಣೆಯಲ್ಲಿ ಅತ್ಯಧಿಕ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಇದ್ದು ಇದರ ಸೇವನೆಯಿಂದ ದೇಹದಲ್ಲಿ ಕೊಲೆಸ್ಟರಾಲ್ ಅಂಶ ಹೆಚ್ಚಾಗುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳೂ ಉಂಟಾಗುವುದು. ತೆಂಗಿನೆಣ್ಣೆಯಲ್ಲಿನ ಶೇ 80ಕ್ಕೂ ಅಧಿಕ ಕೊಬ್ಬಿನಂಶ ಸ್ಯಾಚುರೇಟೆಡ್ ಆಗಿದ್ದು ಇದು ಬೆಣ್ಣೆ (ಶೇ 63), ಗೋಮಾಂಸದಲ್ಲಿನ ಕೊಬ್ಬು(ಶೇ 50)  ಮತ್ತು ಹಂದಿಮಾಂಸದಲ್ಲಿ (ಶೇ 39) ಕೊಬ್ಬಿನಂಶಕ್ಕಿಂತಲೂ ಹೆಚ್ಚಾಗಿದೆ  ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಹೇಳುತ್ತದೆ.

``ಇಂತಹ ಅತಿ ಹೆಚ್ಚು ಕೊಬ್ಬು ಇರುವ ವಸ್ತು ಅನಾರೋಗ್ಯಕರವಾಗಿದ್ದು ಕೆಟ್ಟ ಎಲ್‍ ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸಿ ಹೃದ್ರೋಗಗಳ ಸಂಭಾವ್ಯತೆಯನ್ನೂ ಹೆಚ್ಚಿಸುತ್ತದೆ. ತೆಂಗಿನೆಣ್ಣೆ ನಮ್ಮ ಹೃದಗಳಿಗೆ  ಕೆಟ್ಟ ಸುದ್ದಿಯಾಗಬಹುದು,'' ಎಂದು ಬುಧವಾರ ಪ್ರಕಟವಾದ ಹಾರ್ವರ್ಡ್ ಹೆಲ್ತ್ ಲೆಟರ್ ನಲ್ಲಿ ಹೇಳಲಾಗಿದೆ.

ಕುತೂಹಲಕಾರಿಯೆಂದರೆ ಅದೇ ಹೆಲ್ತ್ ಲೆಟರ್ ನಲ್ಲಿ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಇಲ್ಲಿನ ಇನ್ನೊಬ್ಬ ವೈದ್ಯ ವಾಲ್ಟರ್ ಸಿ ವಿಲ್ಲೆಟ್ ಅವರು  ತೆಂಗಿನೆಣ್ಣೆ ಅಷ್ಟೊಂದು ಕೆಟ್ಟದ್ದೇನಲ್ಲ ಎಂದಿದ್ದಾರೆ. ಅದು ಗುಡ್ ಕೊಲೆಸ್ಟರಾಲ್ ಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News