ಬಕ್ರೀದ್: ಸ್ನೇಹಿತನ ಮನೆಗೆ ಬಂದ ವಿದ್ಯಾರ್ಥಿಗಳಿಗೆ ತಂಡದಿಂದ ಹಲ್ಲೆ; ಐವರು ಸೆರೆ

Update: 2018-08-23 12:17 GMT

ಪುತ್ತೂರು, ಆ. 23: ಬಕ್ರೀದ್ ಪ್ರಯುಕ್ತ ವಿದ್ಯಾರ್ಥಿಯೋರ್ವನ ಮನೆಗೆ ಬರುತ್ತಿದ್ದ ಆತನ ಕಾಲೇಜು ಸಹಪಾಠಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ತಡೆದು, ಹಲ್ಲೆಗೈದು ದಿಗ್ಬಂಧನ ವಿಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸಮೀಪದ ರೆಂಜ ಎಂಬಲ್ಲಿ ಬುಧವಾರ ಈ ಪ್ರಕರಣ ನಡೆದಿದ್ದು, ಇಲ್ಲಿನ ಇಬ್ರಾಹಿಂ ಎಂಬವರ ಪುತ್ರ ಅಬ್ದುಲ್ ಶಮೀರ್ ಮಂಗಳೂರು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ.

ಈತ ಹಬ್ಬದಂದು ತನ್ನ ಸಹಪಾಠಿಗಳನ್ನು ಮನೆಗೆ ಆಹ್ವಾನಿಸಿದ್ದು, 5 ಮಂದಿ ವಿದ್ಯಾರ್ಥಿನಿಯರು ಹಾಗೂ 5 ಮಂದಿ ವಿದ್ಯಾರ್ಥಿಗಳು ಬಸ್ಸಿನಲ್ಲಿ ಆಗಮಿಸಿ ರೆಂಜದಲ್ಲಿ ಇಳಿದು , ಅವರ ಮನೆಗೆ ಹೋಗಲು ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿದ್ದರು. ಈ ವೇಳೆ ರಿಕ್ಷಾ ಚಾಲಕ ವಿಚಾರಿಸಿದಾಗ ಬಕ್ರೀದ್ ಹಬ್ಬದೂಟಕ್ಕಾಗಿ ಅಬ್ದುಲ್ ಶಮೀರ್ ಮನೆಗೆ ಹೋಗುವುದಾಗಿ ತಿಳಿಸಿದ್ದರು. ಈ ವಿಚಾರ ತಿಳಿದ ರಿಕ್ಷಾ ಚಾಲಕ ಅವರನ್ನು ಮನೆಗೆ ಬಿಡಲು ನಿರಾಕರಿಸಿದ್ದಲ್ಲದೆ ಸಂಘ ಪರಿವಾರದ ಸಂಘಟನೆಗಳ ಗಮನಕ್ಕೆ ಈ ವಿಚಾರವನ್ನು ತಿಳಿಸಿದ್ದ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಗೆಳೆಯರನ್ನು ಕರೆದೊಯ್ಯಲೆಂದು ಅಲ್ಲಿಗೆ ಆಗಮಿಸಿದ್ದ ಅಬ್ದುಲ್ ಶಮೀರ್‌ಗೆ ತಂಡವೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿತ್ತು ಆರೋಪಿಸಲಾಗಿದೆ. ಗಾಯಾಳು ಶಮೀರ್ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಗೆ ಸಂಬಧಿಸಿ ವಿದ್ಯಾರ್ಥಿಗಳಿಗೆ ದಿಗ್ಬಂಧನ ಹಾಕಿ ನಿಂದಿಸಿದಲ್ಲದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ, ಧರ್ಮದ ಹೆಸರಿನಲ್ಲಿ ಗಲಾಟೆ ಹಬ್ಬಿಸಲು ಪ್ರಯತ್ನ ನಡೆಸಿದ ಹಾಗೂ ಹಲ್ಲೆ ನಡೆಸಿದ ಆರೋಪದಲ್ಲಿ ಸ್ಥಳೀಯರಾದ ರುಕ್ಮ, ಸತೀಶ್ ಕರ್ನಪ್ಪಾಡಿ, ಶೇಷಪ್ಪ ಪಿಟ್ಟರ್, ರಿಕ್ಷಾ ಚಾಲಕ ಗಣೇಶ್, ಕುಂಞ, ದುಗ್ಗಪ್ಪ ಮತ್ತು ಪುರುಷೋತ್ತಮ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಕ್ರೀದ್ ಅತಿಥ್ಯ ಸ್ವೀಕರಿಸಲು ಬಂದ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಈ ಕೃತ್ಯದ ಬಗ್ಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News