ಉಡುಪಿ: ಕೃಷ್ಣಾಷ್ಟಮಿಗೆ ಯುವತಿಯರಿಂದ ‘ಹುಲಿ ವೇಷ’ ಕುಣಿತ

Update: 2018-08-23 14:23 GMT

ಉಡುಪಿ, ಆ.23: ಉಡುಪಿಯಲ್ಲಿ ಈ ಬಾರಿ ಸೆ. 2ರಂದು ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿಯಲ್ಲಿ ಉಡುಪಿ ಕಡಿಯಾಳಿ ಕಾತ್ಯಾಯಿನಿ ಮಂಟಪದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ನವತರುಣಿಯರು ‘ಅವಿಘ್ನವ್ಯಾಘ್ರಾಸ್’ ಎಂಬ ಹೆಸರಿನಲ್ಲಿ ಹುಲಿವೇ ಹಾಕುವ ತಯಾರಿ ನಡೆಸುತ್ತಿದ್ದಾರೆ.

16 ಮಂದಿ ಯುವತಿಯರು ಹಾಗೂ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 19 ಮಂದಿ ಹುಲಿವೇಷದ ತಯಾರಿಯಲ್ಲಿದ್ದಾರೆ. ಕಳೆದ 15 ದಿನಗಳಿಂದ ದಿನನಿತ್ಯ ಅಭ್ಯಾಸ ಮಾಡುತ್ತಿರುವ ಈ ಮಹಿಳಾ ತಂಡ, ಮೆಸ್ಕಾಂ ನಿವೃತ್ತ ಉದ್ಯೋಗಿ ಶಿವಪ್ಪ ಪೂಜಾರಿ ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಹುಲಿವೇದ ನೃತ್ಯವನ್ನು ಕಲಿಯುತ್ತಿದ್ದಾರೆ.

ಹುಲಿವೇಷ ಕಲಿಸುವ ಶಿವಪ್ಪಪೂಜಾರಿ ಅವರು 80ರ ದಶಕದಲ್ಲಿ ನಿರಂತರ ಎರಡು ಗಂಟೆಗಳ ಕಾಲ ಹುಲಿ ಕುಣಿಯುವಲ್ಲಿ ಪ್ರಸಿದ್ಧರಾದವರು. ಇವರು ತಮಿಳುನಾಡು, ಆಂದ್ರಪ್ರದೇಶ ಹಾಗೂ ಕೇರಳದ ಮಕ್ಕಳಿಗೆ ಹುಲಿವೇಷ ಕಲಿಸುವ ಮೂಲಕ ತುಳುನಾಡಿನ ಸಂಸೃತಿಯನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸುವಲ್ಲಿ ತಮ್ಮ ಪಾಲಿನ ಕಾಣಿಕೆ ನೀಡಿದ್ದಾರೆ.

ಈ ಸಲದ ಹೆಣ್ಣು ಮಕ್ಕಳ ಈ ಹುಲಿವೇಷದ ವಿಶೇಷತೆಯೇನೆಂದರೆ ಹುಲಿ ವೇಷ ಕುಣಿತದಿಂದ ಗಳಿಸುವ ಎಲ್ಲಾ ಆದಾಯವನ್ನು ಗಣೇಶೋತ್ಸವ ಸಮಿತಿಯ ಆಸರೆ ಚಾರಿಟೇಬಲ್ ಟ್ರಸ್ಟ್‌ಗೆ ನೀಡಲಾಗುತ್ತದೆ. ಈ ಆಸರೆ ಯೋಜನೆಯಲ್ಲಿ 25 ಫಲಾನುಭವಿಗಳಿದ್ದು ಇವರು ತಂದೆ-ತಾಯಿಗಳಿಬ್ಬರನ್ನೂ ಕಳೆದುಕೊಂಡ ಅವಕಾಶವಂಚಿತ ಮಕ್ಕಳಾಗಿದ್ದಾರೆ. ಸಮಿತಿ ಈ ಎಲ್ಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲಕ್ಷಾಂತರ ರೂಪಾಯಿಯನ್ನು ನೀಡುತ್ತಿದೆ. ಹೀಗಾಗಿ ಹುಲಿವೇಷದ ಮೂಲಕ ಗಳಿಸಿರುವ ಆದಾಯವನ್ನು ಆಸರೆ ಚಾರಿಟೇಬಲ್ ಟ್ರಸ್ಟ್‌ಗೆ ನೀಡುವುದರಿಂದ ಇದು ಸಮಾಜಕ್ಕೆ ಅತ್ಯಂತ ಒಳ್ಳೆಯ ಸಂದೇಶವಾಗಲಿದೆ.

ಈ ಹುಲಿವೇಷವನ್ನು ಯುವತಿಯರ ಬಟ್ಟೆಯ ಮೇಲೆ ಸ್ಪ್ರೇ ಮಾಡುವುದರ ಮೂಲಕ ಎ1 ಕಾಸ್ಟೂಮ್ಸ್‌ನ ನಿತಿನ್ ಅವರು ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಹುಲಿವೇಷವನ್ನು ಸಜ್ಜುಗೊಳಿಸಲಿದ್ದಾರೆ. ಶ್ರುತಿ ಶೇಟ್ ಮತ್ತು ನವ್ಯಾ ಕಿಣಿ ಈ ಇಬ್ಬರು ಯುವತಿಯರ ನೇತೃತ್ವದಲ್ಲಿ ಈ ಹುಲಿ ವೇಷ ತಂಡ ಉಡುಪಿ ನಗರದ ಆಯ್ದ ಪ್ರದೇಶಗಳಲ್ಲಿ ಪ್ರದರ್ಶನ ನೀಡಲಿದೆ. ಈ ಹುಲಿವೇಷ ತಂಡದಲ್ಲಿ ಯು.ಕೆ.ಜಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯುಸಿ, ಡಿಗ್ರಿ ಮತ್ತು ಇಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿನಿಯರಿದ್ದಾರೆ.

ಈ ಯುವತಿಯರ ತಂಡ ಉಡುಪಿಯಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್, ರಾಷ್ಟ್ರೀಯ ಸಂಸ್ಕೃತ ಸಮ್ಮೇಳನದಲ್ಲಿ ಹಾಗೂ ಉಡುಪಿಗೆ ಮಾತಾ ಅಮೃತಾನಂದಮಯಿ ಆಗಮಿಸಿದ ಸಮಯದಲ್ಲಿ ಕಾರ್ಯಕರ್ತರಾಗಿ ದುಡಿದು ವಿಶೇಷ ಗಮನ ಸೆಳೆದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿರುವ ಗಣೇಶೋತ್ಸವ ಸಮಿತಿಗಳಲ್ಲೇ ಅತ್ಯಂತ ಹೆಚ್ಚು ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಸದಸ್ಯೆಯರಾಗಿ ಪಡೆದ ಸಮಿತಿ ಕಡಿಯಾಳಿ ಕಾತ್ಯಾಯಿನಿ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News