ತಂಜಾವೂರು, ವೆಲಂಕಣಿ ಕ್ಷೇತ್ರಗಳಿಗೆ ವಿಶೇಷ ರೈಲು
ಉಡುಪಿ, ಆ.23: ಮುಂದಿನ ಸೆ.8ರಂದು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನ ಮೊಂತಿಫೆಸ್ತ್ ಹಬ್ಬವಾಗಿದ್ದು, ಅಂದು ಕಿಸ್ತ ಧರ್ಮೀಯರು ಹೊಸಅಕ್ಕಿ ಊಟದ ಹಬ್ಬವನ್ನು ಆಚರಿಸುತ್ತಾರೆ. ಈ ಪ್ರಯುಕ್ತ ಮೇರಿ ಮಾತೆಯ ಕ್ಷೇತ್ರವಾದ ವೆಲಂಕಣಿಯಲ್ಲಿ ವಿಶೇ ಉತ್ಸವವನ್ನು ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆಯು ವಾಸ್ಕೊಡಿಗಾಮದಿಂದ ಮಂಗಳೂರು ಮೂಲಕ ವೆಲಂಕಣಿಗೆ ಆ.27, ಸೆ.3 ಮತ್ತು 9ರಂದು ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಈ ರೈಲು ವಾಸ್ಕೊಡಿಗಾಮದಿಂದ ಆ ದಿನಗಳಲ್ಲಿ ಬೆಳಗ್ಗೆ 11:20ಕ್ಕೆ ಹೊರಟು ಉಡುಪಿಗೆ ಸಂಜೆ 5:10ಕ್ಕೆ ಬರಲಿದ್ದು, ವೆಲಂಕಣಿಗೆ ಮರುದಿನ ಅಪರಾಹ್ನ 1 ಗಂಟೆಗೆ ತಲುಪಲಿದೆ.
ಅದೇ ರೀತಿ ಆ.29, ಸೆ.3, 8 ಮತ್ತು 9ರಂದು ವೆಲಂಕಣಿಯಿಂದ ಮಧ್ಯರಾತ್ರಿ 11:45ರ ಸಮಯದಲ್ಲಿ ಮರುಪ್ರಯಾಣ ಬೆಳೆಸಲಿದ್ದು, ಉಡುಪಿಗೆ ಮರುದಿನ ಸಂಜೆ 4:55ಕ್ಕೆ ತಲುಪಿ ಬಳಿಕ ವಾಸ್ಕೊಡಿಗಾಮಕ್ಕೆ ತೆರಳಲಿದೆ. ಈ ರೈಲು ತಂಜಾವೂರು ಮೂಲಕ ಹಾದು ಹೋಗುವುದರಿಂದ ಹಿಂದೂ ಬಾಂಧವರು ತಂಜಾವೂರಿನ ಪ್ರಸಿದ್ಧ ಶ್ರೀಬ್ರಹದೇಶ್ವರ ದೇವಸ್ಥಾನಕ್ಕೆ ಹೋಗಲು ಅನುಕೂಲ ವಾಗಲಿದೆ. ಯಾತ್ರಿಕರು ಈ ಸೌಲಭ್ಯತೆಗಳ ಸದುಪಯೋಗ ಪಡೆದುಕೊಳ್ಳ ಬೇಕೆಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಾಯಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.