×
Ad

ಉಡುಪಿ: ದ್ರಾವಿಡ ಸಮ್ಮೇಳನದಲ್ಲಿ ತುಳುಭಾಷೆಯ ನಿರ್ಲಕ್ಷ್ಯ

Update: 2018-08-23 19:57 IST

ಉಡುಪಿ, ಆ.23: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನವಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಿರುವ ದ್ರಾವಿಡ ಸಮ್ಮೇಳನದಲ್ಲಿ ತುಳುಭಾಷೆಯ ಹೆಸರನ್ನು ಉಲ್ಲೇಖಿಸದೆ ನಿರ್ಲಕ್ಷಿಸಲಾಗಿದೆ ಎಂದು ಕರಾವಳಿ ಉಭಯ ಜಿಲ್ಲೆಗಳ ತುಳುವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚ ದ್ರಾವಿಡ ಭಾಷೆಗಳೆಂದೇ ಖ್ಯಾತಿಗಳಿಸಿದ ತುಳು, ಕನ್ನಡ, ತಮಿಳು, ತೆಲುಗು, ಮಲೆಯಾಳ ಭಾಷೆಗಳು ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಯ ಪ್ರತೀಕ. ಕನ್ನಡ, ತಮಿಳು, ತೆಲುಗು, ಮಲೆಯಾಳ ಭಾಷೆಗಳಿಗೆ ಪ್ರತ್ಯೇಕ ಆಡಳಿತ ರಾಜ್ಯಗಳಿದ್ದರೂ ತುಳು ಭಾಷೆಯು ಕರ್ನಾಟಕದ ಇನ್ನೊಂದು ಪ್ರಧಾನ ಭಾಷೆಯಾಗಿ ಬೆಳೆದಿದೆ.

ತುಳು ಭಾಷೆಯನ್ನು ಕರ್ನಾಟಕದಲ್ಲಿ ಇಂದು ಹತ್ತನೆ ತರಗತಿಯವರೆಗೆ ಕಲಿಯಬಹುದಾಗಿದ್ದು, ಎಂ.ಎ. ಹಾಗೂ ಡಿಪ್ಲೋಮಾ ಕೋರ್ಸುಗಳೂ ಈಗಾಗಲೇ ಪ್ರಾರಂಭವಾಗಿವೆ. ಮಂಗಳೂರು ವಿವಿ, ಕಣ್ಣೂರು ವಿವಿ, ಕುಪ್ಪಂ ವಿವಿ ಹಾಗೂ ನಿಟ್ಟೆ ವಿವಿಗಳಲ್ಲಿ ಅಧ್ಯಯನ ಪೀಠಗಳು ಈಗಾಗಲೇ ಪ್ರಾರಂಭವಾಗಿವೆ. ಕೇರಳ ಮತ್ತು ಕರ್ನಾಟಕಗಳಲ್ಲಿ ಪ್ರತ್ಯೇಕ ತುಳು ಆಕಾಡೆಮಿಗಳೂ ಪ್ರಾರಂಭಗೊಂಡಿವೆ.

ತುಳುಭಾಷೆಗೆ ತನ್ನದೇ ಆದ ಸ್ವತಂತ್ರ ಲಿಪಿಯಿದ್ದು, ಹಲವಾರು ಕೃತಿಗಳು, ಗ್ರಂಥಗಳು, ರಚಿತವಾಗಿವೆ. ಹಾಗೆಯೇ ತುಳು ಲಿಪಿ ಸಾರ್ವತ್ರಿಕವಾಗಿ ಪ್ರಚಲಿತ ಗೊಳ್ಳುತ್ತಿದೆ. ಹೀಗಾಗಿ ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಕೂಡ ಪ್ರಧಾನ ಭಾಷೆಯಾಗಿದೆ. ತುಳುಭಾಷೆಯಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಮ್ಮದೇ ನೆಲದಲ್ಲಿ ದ್ರಾವಿಡ ಸಮ್ಮೇಳನ ಮಾಡುತ್ತಿರುವಾಗ ತುಳು ಭಾಷೆಯ ಬಗ್ಗೆ ಪ್ರಸ್ತಾಪಿಸದಿರುವುದು ತುಳುವರಿಗೆ ತೀವ್ರ ನೋವು ಮತ್ತು ಸಂದೇಹವನ್ನುಂಟುಮಾಡಿದೆ ಎಂದು ವಿವಿಧ ಸಂಘಟನೆಗಳು ಅಭಿಪ್ರಾಯ ಪಟ್ಟಿವೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಜಾಣ ಕುರುಡುತನವನ್ನು ಪ್ರಾರಂಭದಲ್ಲೇ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ಇನ್ನೊಂದು ಪ್ರತ್ಯೇಕತೆಯ ಹೋರಾಟ ಕ್ಕೆ ದಾರಿ ಮಾಡಿಕೊಡಬಹುದು. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಸೂಕ್ತ ಹೋರಾಟವನ್ನು ಎದುರಿಸಬೇಕಾದೀತು ಎಂದು ತುಳುವೆರೆ ಆಯನ ಕೂಟ ಕುಡ್ಲ ಮತ್ತು ತುಳುನಾಡ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳು ಮುನ್ನೆಚ್ಚರಿಕೆ ನೀಡಿವೆ.

ಈ ಬಗ್ಗೆ ನಡೆದ ಸಭೆಯಲ್ಲಿ ಡಾ. ರಾಜೇಶ ಆಳ್ವ, ದಯಾನಂದ್ ಕತ್ತಲ್‌ಸಾರ್, ದಿನೇಶ್ ರೈ ಕಡಬ, ಹರೀಶ್ ಶೆಟ್ಟಿ ಪಣೆಯೂರು, ಜಿ.ವಿ.ಎಸ್. ಉಳ್ಳಾಲ್, ಆಶಾ ಶೆಟ್ಟಿ ಅತ್ತಾವರ, ಯಾದವ್ ಕೊಟ್ಯಾನ್ ಪದವಿನಂಗಡಿ, ಗಣೇಶ್ ಪದವಿನಂಗಡಿ, ವಿದ್ಯಾಶ್ರೀ ಎಸ್.ಉಳ್ಳಾಲ್, ಚಂದ್ರಿಕಾ ಶೆಟ್ಟಿ, ನಾಗರಾಜ್, ಭೂಷಣ್ ಕುಲಾಲ್, ಪ್ರಸಾದ್ ಕೊಂಚಾಡಿ, ಮಹೇಶ್ ಶೆಟ್ಟಿ ಮುಂಡಾಜೆ, ಚೇತನ್ ಕುಮಾರ್ ಕುಲಶೇಖರ ಮೊದಲಾದವರು ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News