×
Ad

ವಯೋವೃದ್ಧೆ ಕೊಲೆ ಪ್ರಕರಣ: ಆರೋಪಿ ಖುಲಾಸೆ

Update: 2018-08-23 20:04 IST

ಮಂಗಳೂರು, ಆ. 23: ನಗರದ ಕುದ್ರೋಳಿ ಅಳಕೆಯ ಭೋಜರಾವ್ ಲೇನ್‌ನ ಗುಜರಾತಿ ಶಾಲೆಯ ಸಮೀಪ ಪ್ರಗತಿ ಸರ್ವೀಸ್ ಸ್ಟೇಷನ್ ಎದುರಿನ ಮನೆಯಲ್ಲಿ 2014ರಲ್ಲಿ ನಡೆದ ವಯೋವೃದ್ಧೆ ಸುಶೀಲ ಬೆನ್ (72) ಕೊಲೆ ಪ್ರಕರಣದ ಆರೋಪಿ ಬೆಳಗಾವಿಯ ಸಿದ್ದಪ್ಪ (32) ನನ್ನು ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

2014 ಜು.31ರಂದು ರಾತ್ರಿ ಆರೋಪಿಯು ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿ ಈ ವೃದ್ಧ ಮಹಿಳೆಯನ್ನು ಮಲಗಿದಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು ಹಾಗೂ ಬಳಿಕ ಆಕೆಯ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಲ್ಲದೆ, ಮನೆ ಆವರಣದಲ್ಲಿ ನಿಲ್ಲಿಸಿದ್ದ ಕಾರನ್ನು ಕೂಡ ಕದ್ದೊಯ್ದಿದ್ದನು ಎಂದು ಆರೋಪಿಸಲಾಗಿತ್ತು.

ಘಟನೆಯ ವಿವರ:

ಸುಶೀಲ ಬೆನ್ ಅವರು ನೆಲ ಅಂತಸ್ತಿನಲ್ಲಿ ಹಾಗೂ ಅವರ ಪುತ್ರ ಸಂದೀಪ್ ಮತ್ತು ಸೊಸೆ ಹಾಗೂ ಮೊಮ್ಮಗ ಮಹಡಿಯಲ್ಲಿ ಮಲಗಿದ್ದು, ಕೆಳಗಿನ ಮನೆಯಲ್ಲಿ ಒಬ್ಬಂಟಿಯಾಗಿ ಮಲಗಿದ್ದ ಸುಶೀಲ ಬೆನ್ ಕೊಲೆಯಾಗಿರುವ ಸಂಗತಿ ಮರುದಿನ (ಆ.1) ಬೆಳಗ್ಗೆ ಬೆಳಕಿಗೆ ಬಂದಿತ್ತು. ಸಂದೀಪ್ ಅವರು ಬೆಳಗ್ಗೆ 6 ಗಂಟೆಗೆ ಎದ್ದು ಜಿಮ್‌ಗೆ ಹೋಗಲೆಂದು ಮಹಡಿಯಿಂದ ಇಳಿದು ಕೆಳಗಡೆ ಬಂದು ಕಾರಿನ ಕೀ ಹುಡುಕಿದಾಗ ಅದು ಹಿಂದಿನ ರಾತ್ರಿ ಇರಿಸಿದ್ದ ಜಾಗದಲ್ಲಿ ಇರಲಿಲ್ಲ. ಸಂಶಯದಿಂದ ತಾಯಿ ಸುಶೀಲ ಬೆನ್ ಮಲಗಿದಲ್ಲಿಗೆ ಹೋದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಹಾಗೂ ಅವರ ಚಿನ್ನಾಭರಣಗಳನ್ನು ದರೋಡೆ ಮಾಡಿರುವುದು ಕಂಡು ಬಂದಿತ್ತು. ಬಳಿಕ ಹೊರಗೆ ಹೋಗಿ ನೋಡಿದಾಗ ಕಾರು ಕೂಡಾ ಕಳವಾಗಿರುವುದು ಗೊತ್ತಾಗಿತ್ತು. ಬಳಿಕ ಕಾರು ಅದೇ ದಿನ ಬೆಳಗ್ಗೆ ಬಿಜೈ ಕೆಎಸ್ಸಾರ್ಟಿಸಿ ಬಳಿ ಪತ್ತೆಯಾಗಿತ್ತು.

ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಈ ಮಧ್ಯೆ ಉರ್ವ ಠಾಣೆಯ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಿ ತನಿಖೆಗೆ ಒಳ ಪಡಿಸಿದಾಗ ಅವರಲ್ಲಿ ಒಬ್ಬನಾದ ಕೆಎಸ್ಸಾರ್ಟಿಸಿಯಲ್ಲಿ ವಾಚ್‌ಮೆನ್ ಆಗಿದ್ದ ಸಿದ್ದಪ್ಪ ನೀಡಿದ ತಪೊಪ್ಪಿಗೆ ಹೇಳಿಕೆಯಲ್ಲಿ ತಾನು ಅಳಕೆಯ ವೃದ್ಧೆ ಸುಶೀಲ ಬೆನ್ ಅವರನ್ನು ಕೊಲೆಗೈದು ಚಿನ್ನಾಭರಣಗಳನ್ನು ದರೋಡೆ ಮಾಡಿರುವುದಾಗಿ ತಿಳಿಸಿದ್ದನು.

ಈ ಹಿನ್ನೆಲೆಯಲ್ಲಿ ಆತನನ್ನು ಕದ್ರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಕದ್ರಿ ಪೊಲೀಸರು ತನಿಖೆಯನ್ನು ನಡೆಸಿದಾಗ ಸುಶೀಲ ಬೆನ್ ಕೊಲೆಗೈದ ಬಳಿಕ ದರೋಡೆ ಮಾಡಿದ್ದ ಚಿನ್ನಾಭರಣಗಳನ್ನು ಬೆಳಗಾವಿ ಜಿಲ್ಲೆ ಸವದತ್ತಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದನು. ಅದರಂತೆ ಪೊಲೀಸರು ಸವದತ್ತಿಗೆ ತೆರಳಿ ಚಿನ್ನವನ್ನು ವಶಕ್ಕೆ ಪಡೆದು ಬಳಿಕ ಸಿದ್ದಪ್ಪನ ವಿರುದ್ಧ ಆರೋಪ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲದ ನ್ಯಾಯಾಧೀಶ ಮುರಳೀಧರ ಪೈ 18 ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಆದರೆ ಆರೋಪಿ ಸಿದ್ದಪ್ಪನ ಮೇಲಣ ಆರೋಪವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಲವಾಗಿದೆ ಎಂಬ ತೀರ್ಮಾನಕ್ಕೆ ಬಂದು ಆತನನ್ನು ಖುಲಾಸೆಗೊಳಿಸಿ ಆ.21ರಂದು ತೀರ್ಪು ನೀಡಿದರು.

ಆರೋಪಿ ಸಿದದ್ದಪ್ಪನ ಪರವಾಗಿ ವಕೀಲರಾದ ವೇಣುಕುಮಾರ್ ಮತ್ತು ಯುವರಾಜ್ ಕೆ. ಅಮೀನ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News