×
Ad

ಕೊಡಗಿನ ಸಂತ್ರಸ್ತ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ: ವಿವೇಕಾನಂದ ವಿದ್ಯಾವರ್ಧಕ ಸಂಘ

Update: 2018-08-23 20:29 IST

ಪುತ್ತೂರು, ಆ. 23: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತ ಕುಟುಂಬಗಳಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಪ್ರಸ್ತುತ ವರ್ಷದಲ್ಲಿ ಉಚಿತವಾಗಿ ವಸತಿ ಸಹಿತ ಶಿಕ್ಷಣವನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಎಂ. ಕೃಷ್ಣಭಟ್ ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೊಡಗಿನಲ್ಲಿ ಉಂಟಾಗಿರುವ ಹಾನಿಯಿಂದಾಗಿ ಇದೀಗ ಸಾಕಷ್ಟು ಮಂದಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರ ಶಿಭಿರದಲ್ಲಿ ವಾಸ್ತವ್ಯವಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸವು ಅರ್ಧದಲ್ಲಿ ಮೊಟಕುಗೊಂಡಿದೆ. ಅಂತಹ ಮಕ್ಕಳಿಗಾಗಿ ಶಿಕ್ಷಣ ಆಧಾರಿತ ಸಹಾಯ ಒದಗಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು ಎಂದ ಅವರು ಆಸಕ್ತರಿಗೆ 5ನೇ ತರಗತಿಯಿಂದ ಆರಂಭಗೊಂಡು ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ, ಇಂಜಿನಿಯರಿಂಗ್ ತನಕದ ಎಲ್ಲಾ ಶಿಕ್ಷಣವನ್ನು ಪ್ರಸ್ತುತ ವರ್ಷಕ್ಕೆ ಮುಂದುವರಿಸಲು ಸಂಘ ಯೋಚಿಸಿದೆ. ಪ್ರಾಕೃತಿಕ ವಿಕೋಪದಿಂದಾಗಿ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದಿರುವ ಅಲ್ಲಿನ ವಿದ್ಯಾರ್ಥಿಗಳಿಗೆ ಮುಂದಿನ ಒಂದು ವರ್ಷದ ವರೆಗೆ ಯಾವುದೇ ಶುಲ್ಕವಿಲ್ಲದೆ, ಉಚಿತವಾಗಿ ವಸತಿ ಹಾಗೂ ಅವರಿಗೆ ಸಂಬಂಧಿಸಿದ ಶಿಕ್ಷಣವನ್ನು ನೀಡುವ ಹಿನ್ನೆಲೆಯಲ್ಲಿ, ಸರ್ಕಾರದ ನಿಯಮಗಳ ಅಡಿ ಅಂತಹ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದಕ್ಕೆ ವಿದ್ಯಾವರ್ಧಕ ಸಂಘ ನಿರ್ಧರಿಸಿದೆ.

ಸಂತ್ರಸ್ತರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ಆರ್ಥಿಕ ಧನ ಸಹಾಯ ನೀಡಲಾಗುತ್ತಿದ್ದು, ಸುಮಾರು 18 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಒಂದೂವರೆ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳು ಸ್ವಯಂಪ್ರೇರಿತರಾಗಿ ನೀಡಿರುವ ಮೊತ್ತವನ್ನು ಕೊಡಗಿಗೆ ರವಾನಿಸಲು ಸಿದ್ಧತೆಗಳು ನಡೆದಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಇ. ಶಿವಪ್ರಸಾದ್, ಟೀಚರ್ ಟ್ರೈನರ್ ಸೆಲ್ ಸಂಚಾಲಕ ರಘುರಾಜ್ ಉಬರಡ್ಕ ಮತ್ತು ಉಪನ್ಯಾಸಕರ ರಾಜೇಶ್ ಕಮ್ಮಾಜೆ ಸಂತ್ರಸ್ತರ ಉಚಿತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಂಪರ್ಕಿಸಬೇಕಾದ ಸಂಖ್ಯೆ : ಲಕ್ಷ್ಮೀ ಪ್ರಸಾದ್ - 9972420885, ವೆಂಕಟೇಶ್ - 9731774703, ರಘುರಾಜ್ ಉಬರಡ್ಕ - 9449061223, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಛೇರಿ - 08251236599 ಕರೆ ಮಾಡಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News