ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸಾವಿರ ಇಸ್ರೇಲಿ ಮನೆ ನಿರ್ಮಾಣ: ಇಸ್ರೇಲ್ ಅನುಮೋದನೆ

Update: 2018-08-23 15:30 GMT

ಜೆರುಸಲೇಂ, ಆ. 23: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿಗರಿಗಾಗಿ 1,000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸುವ ಯೋಜನೆಗೆ ಇಸ್ರೇಲ್ ಅಧಿಕಾರಿಗಳು ಬುಧವಾರ ಅಂಗೀಕಾರ ನೀಡಿದ್ದಾರೆ ಎಂದು ‘ಪೀಸ್ ನೌ’ ಎಂಬ ಸರಕಾರೇತರ ಸಂಘಟನೆಯೊಂದು ಹೇಳಿದೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಇಂಥ ಹಲವು ಯೋಜನೆಗಳಿಗೆ ಇಸ್ರೇಲ್ ಅನುಮತಿ ನೀಡಿರುವುದನ್ನು ಸ್ಮರಿಸಬಬಹುದಾಗಿದೆ.

ರಕ್ಷಣಾ ಸಚಿವಾಲಯ ಸಮಿತಿಯೊಂದು ಅನುಮೋದನೆ ನೀಡಿರುವ 1,004 ಮನೆಗಳ ನಿರ್ಮಾಣ ಯೋಜನೆ ವಿವಿಧ ಹಂತಗಳಲ್ಲಿದೆ.

 ಇವುಗಳ ಪೈಕಿ 370 ಮನೆಗಳು ಆ್ಯಡಮ್ ಕಾಲನಿಯಲ್ಲಿ ನಿರ್ಮಾಣಗೊಳ್ಳಲಿವೆ. ಇಲ್ಲಿ ಜುಲೈ ತಿಂಗಳಲ್ಲಿ ಫೆಲೆಸ್ತೀನಿಯನೊಬ್ಬ ಮೂವರು ಇಸ್ರೇಲಿಗರಿಗೆ ಇರಿದಿದ್ದನು. ಆ ಮೂವರ ಪೈಕಿ ಓರ್ವ ಮೃತಪಟ್ಟಿದ್ದಾನೆ.

ಇರಿತದ ಘಟನೆಗೆ ಪ್ರತಿಯಾಗಿ ಈ ಕಾಲನಿಯಲ್ಲಿ 400 ಹೊಸ ಮನೆಗಳನ್ನು ನಿರ್ಮಿಸುವ ಘೋಷಣೆಯನ್ನು ರಕ್ಷಣಾ ಸಚಿವ ಆ್ಯವಿಗ್ಡರ್ ಲೈಬರ್‌ಮನ್ ಮಾಡಿದ್ದರು.

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ವಸಾಹತುಗಳ ನಿರ್ಮಾಣವನ್ನು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂಬುದಾಗಿ ಪರಿಗಣಿಸಲಾಗಿದೆ. ತಮ್ಮ ಭವಿಷ್ಯದ ದೇಶಕ್ಕಾಗಿ ಫೆಲೆಸ್ತೀನಿಯರು ಬಯಸುವ ಜಮೀನಿನಲ್ಲಿ ಈ ಮನೆಗಳನ್ನು ನಿರ್ಮಿಸಲಾಗುತ್ತಿರುವುದರಿಂದ ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಗೆ ಇದು ಮಾರಕವಾಗಿದೆ.

ವಸಾಹತುಗಳ ನಿರಂತರ ವಿಸ್ತರಣೆಯು, ಇಸ್ರೇಲಿ-ಫೆಲೆಸ್ತೀನ್ ಸಂಘರ್ಷಕ್ಕೆ ಎರಡು-ರಾಷ್ಟ್ರ ಪರಿಹಾರದ ಅಳಿದುಳಿದ ಭರವಸೆಗಳನ್ನೂ ಕುಗ್ಗಿಸಿದೆ.

ಆದರೆ, ಇದನ್ನು ನಿರಾಕರಿಸುವ ಇಸ್ರೇಲ್, ಇಸ್ರೇಲ್‌ನ ಮೊಂಡುತನ, ಹಿಂಸೆ ಮತ್ತು ತನ್ನ ವಿರುದ್ಧ ನಡೆಸುತ್ತಿರುವ ಪಿತೂರಿಯು ಸ್ಥಗಿತಗೊಂಡಿರುವ ಶಾಂತಿ ಪ್ರಕ್ರಿಯೆಗೆ ಕಾರಣ ಎಂದು ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News