ಜನಸಂಖ್ಯಾ ಪ್ರಮಾಣ: 2030ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿರುವ ಭಾರತ

Update: 2018-08-23 16:00 GMT

ಹೊಸದಿಲ್ಲಿ, ಆ.23: 2030ರ ಮಧ್ಯಾವಧಿಯಲ್ಲಿ ಭಾರತದ ಜನಸಂಖ್ಯಾ ಪ್ರಮಾಣ ಚೀನಾಕ್ಕಿಂತ ಶೇ.8ರಷ್ಟು ಹೆಚ್ಚಾಗಲಿದೆ . 2050ರ ಮಧ್ಯಾವಧಿಯಲ್ಲಿ ಈ ‘ಮುನ್ನಡೆ’ ಶೇ.25ಕ್ಕೇರಲಿದೆ ಎಂದು ವಾಷಿಂಗ್ಟನ್ ಮೂಲದ ‘ಪಾಪ್ಯುಲೇಷನ್ ರೆಫರೆನ್ಸ್ ಬ್ಯೂರೊ(ಪಿಆರ್‌ಬಿ) ಬಿಡುಗಡೆಗೊಳಿಸಿರುವ 2018 ವಿಶ್ವ ಜನಸಂಖ್ಯಾ ದತ್ತಾಂಶ ಪಟ್ಟಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ 2050ರ ವೇಳೆಗೆ ಭಾರತ ಈಗಿನಂತೆ ಯುವಜನತೆಯ ದೇಶವಾಗಿರುವುದಿಲ್ಲ. 65 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಜನರ ಪ್ರಮಾಣ ಶೇ.13ಕ್ಕೇರಲಿದೆ(2018ರಲ್ಲಿ ಶೇ.6). 15 ವರ್ಷಕ್ಕಿಂತ ಕೆಳಗಿನ ಯುವಕರ ಸಂಖ್ಯೆ ಈಗ ಶೇ.28ರಷ್ಟಿದ್ದರೆ, ಮೂರು ದಶಕಗಳ ಬಳಿಕ ಈ ಪ್ರಮಾಣ ಶೇ.19ಕ್ಕೆ ಇಳಿಯಲಿದೆ. ಈಗ ಚೀನಾದಲ್ಲಿ ಭಾರತಕ್ಕಿಂತ 22 ಮಿಲಿಯನ್ ಹೆಚ್ಚು ಜನರಿದ್ದಾರೆ. ಈ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಾ ಸಾಗಿ 2030ರ ವೇಳೆ ಭಾರತದ ಜನಸಂಖ್ಯೆ ಚೀನಾಕ್ಕಿಂತ 112 ಮಿಲಿಯನ್ ಹೆಚ್ಚಾಗಲಿದೆ. 2050ರ ವೇಳೆ ಈ ಅಂತರ 336 ಮಿಲಿಯನ್‌ಗೆ ತಲುಪಲಿದೆ ಎಂದು ಪಿಆರ್‌ಬಿ ವರದಿಯಲ್ಲಿ ತಿಳಿಸಲಾಗಿದೆ.

 ಭಾರತದ ಜನಸಂಖ್ಯೆ 2030ರ ವೇಳೆ 1.53 ಬಿಲಿಯನ್, 2050ರಲ್ಲಿ 1.68 ಬಿಲಿಯನ್ ಇರಲಿದೆ. ಆದರೆ ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು ಕ್ರಮೇಣ ಕಡಿಮೆಯಾಗಲಿದೆ. 2018ರಲ್ಲಿ ವಿಶ್ವದ ಜನಸಂಖ್ಯೆಯ ಶೇ.18ರಷ್ಟು ಜನ ಭಾರತದಲ್ಲಿದ್ದರೆ, 2050ರ ವೇಳೆ ಈ ಪ್ರಮಾಣ ಶೇ.17.1 ಆಗಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News