ವಾಜಪೇಯಿಗೆ ಸಂತಾಪ ಸೂಚಿಸುವ ನಿರ್ಣಯ ವಿರೋಧಿಸಿದ್ದ ಕಾರ್ಪೊರೇಟರ್ ಜೈಲಿಗೆ

Update: 2018-08-23 16:17 GMT

ಮುಂಬೈ, ಆ.23: ಆಗಸ್ಟ್ 16ರಂದು ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಂತಾಪ ಸೂಚಿಸುವ ನಿರ್ಣಯಕ್ಕೆ ವಿರೋಧ ಸೂಚಿಸಿದ್ದ ಎಐಎಂಐಎಂ ಕಾರ್ಪೊರೇಟರ್ ಸಯ್ಯದ್ ಮತೀನ್ ಸಯ್ಯದ್ ರಶೀದ್‌ರನ್ನು ಬಂಧಿಸಲಾಗಿದ್ದು ಜೈಲಿಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 17ರಂದು ನಡೆದ ಔರಂಗಾಬಾದ್ ನಗರಪಾಲಿಕೆಯ ಸಭೆಯಲ್ಲಿ ವಾಜಪೇಯಿಯವರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿದಾಗ ಮತೀನ್ ವಿರೋಧಿಸಿದ್ದರು. ಆಗ ಕೆಲವು ಬಿಜೆಪಿ ಕಾರ್ಪೊರೇಟರ್‌ಗಳು ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಐಪಿಸಿ ಸೆಕ್ಷನ್ 294ರಡಿ ಮತೀನ್‌ರನ್ನು ಪೊಲೀಸರು ಬಂಧಿಸಿದ್ದು ಇವರ ವಿರುದ್ಧ ಧರ್ಮ, ಜಾತಿ, ಹುಟ್ಟಿದ ಸ್ಥಳ ಅಥವಾ ಭಾಷೆಯ ವಿಷಯದಲ್ಲಿ ವಿವಿಧ ಪಂಗಡದವರ ಮಧ್ಯೆ ದ್ವೇಷಭಾವನೆಗೆ ಪ್ರೋತ್ಸಾಹ ನೀಡುವ ಮತ್ತು ಗಲಭೆ ಸೃಷ್ಟಿಸುವ ಸಂಚಿನಿಂದ ಪ್ರಚೋದನೆಗೊಳಿಸುವ ಆರೋಪ ಹೊರಿಸಲಾಗಿದೆ. ಮಂಗಳವಾರ ಬಂಧನವಾದ ತಕ್ಷಣ ಮತೀನ್‌ಗೆ ಜಾಮೀನು ದೊರೆತರೂ ಎಂಪಿಡಿಎ ಕಾಯ್ದೆಯಡಿ ನಗರ ಪೊಲೀಸ್ ಕಮಿಷನರ್ ಅವರ ಆದೇಶದಂತೆ ಮತ್ತೆ ಬಂಧಿಸಿ ಜೈಲಿಗೆ ಹಾಕಲಾಗಿದೆ. ಮತೀನ್ ವಿರುದ್ಧ ಈ ಹಿಂದೆಯೇ ಎರಡು ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಈತನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ಪರಿಶೀಲನೆ ನಡೆಸಿದಾಗ ಈತ ಅಪಾಯಕಾರಿ ವ್ಯಕ್ತಿಯಾಗಿದ್ದು ಎರಡು ಸಮುದಾಯದ ಮಧ್ಯೆ ವೈರತ್ವಕ್ಕೆ ಪೋತ್ಸಾಹ ನೀಡುವ ಸಾಧ್ಯತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಜೈಲಿಗೆ ಹಾಕಲಾಗಿದ್ದು 1 ವರ್ಷದ ಜೈಲುಶಿಕ್ಷೆ ವಿಧಿಸಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News