×
Ad

ಜಾಮಿಯಾ ಮಿಲ್ಲಿಯ ಇತಿಹಾಸದಲ್ಲೇ ಅತಿಹೆಚ್ಚು ಸಂಬಳದ ಕೆಲಸ ಪಡೆದ ಆಮಿರ್ ಅಲಿ

Update: 2018-08-23 22:05 IST
 ತಂದೆ ಶಂಶಾದ್ ಅಲಿ ಜೊತೆ ಆಮಿರ್ ಅಲಿ

ಹೊಸದಿಲ್ಲಿ, ಆ.23: ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ (ಜೆಎಂಐ) ವಿದ್ಯಾರ್ಥಿ ಮುಹಮ್ಮದ್ ಆಮಿರ್ ಅಲಿಯವರ ಯಶೋಗಾಥೆ ಭವಿಷ್ಯದ ಪೀಳಿಗೆಗೆ ಮಾದರಿಯಾಗಬಹುದು. ಜೆಎಂಐ ಶಾಲಾ ಮಂಡಳಿ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದ ಅಲಿ, ಮೂರು ವರ್ಷಗಳ ಕಾಲ ಬಿ-ಟೆಕ್ ಸೀಟು ಗಳಿಸಲು ವಿಫಲರಾಗಿದ್ದರು. ಮೊದಲ ಪ್ರಯತ್ನ ವಿಫಲವಾದಾಗ ಅಲಿ ಜೆಎಂಐನ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಸೇರಿದರು. ಇದಾದ ಬಳಿಕ ನಡೆಸಿದ ಎರಡು ಪ್ರಯತ್ನಗಳೂ ವಿಫಲವಾದವು.

ಇಷ್ಟಾಗಿಯೂ ಅಲಿ ಓದಿನ ಬಗೆಗಿನ ಒಲವು ಕಳೆದುಕೊಳ್ಳಲಿಲ್ಲ. ಎಲೆಕ್ಟ್ರಿಕ್ ವಾಹನಗಳ ಪ್ರಾಜೆಕ್ಟ್‍ನಲ್ಲಿ ಕೆಲಸ ಮುಂದುವರಿಸಿದ್ದರು. "ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯ ಕೊರತೆ ಇದೆ. ನಾನು ನಡೆಸುತ್ತಿರುವ ಯೋಜನೆ ಯಶಸ್ವಿಯಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಚಿಂಗ್ ವೆಚ್ಚ ಬಹುತೇಕ ಶೂನ್ಯವಾಗುತ್ತದೆ" ಎಂಬ ಅಲಿ ಹೇಳಿಕೆಯನ್ನು ಉಲ್ಲೇಖಿಸಿ ‘ದ ಹಿಂದೂ’ ವರದಿ ಮಾಡಿತ್ತು.

ಈ ಯೋಜನೆ ಕ್ರಮೇಣ ಅಮೆರಿಕ ಮೂಲದ ಫ್ರಿಸ್ಸನ್ ಮೋಟರ್ ವೆರ್ಕ್ಸ್ ಗಮನ ಸೆಳೆಯಿತು. ಜೆಎಂಇ ವೆಬ್‍ಸೈಟ್ ಮೂಲಕ ಈ ಯೋಜನೆ ಬಗ್ಗೆ ತಿಳಿದುಕೊಂಡು ಫ್ರಿಸ್ಸನ್ ಮೋಟರ್ ವೆರ್ಕ್ಸ್ ವಿಶ್ವವಿದ್ಯಾನಿಲಯ ಅಧಿಕಾರಿಗಳನ್ನು ಸಂಪರ್ಕಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಒಂದು ತಿಂಗಳ ಕಾಲ ಸಂವಾದ ನಡೆಸಿ, ದೂರವಾಣಿ ಮೂಲಕ ಸಂದರ್ಶನ ನಡೆಸಿದ ಬಳಿಕ ಈ ಸಂಸ್ಥೆ ಅಲಿಗೆ ಉದ್ಯೋಗ ನೀಡಲು ಮುಂದಾಗಿದೆ. ಬ್ಯಾಟರಿ ನಿರ್ವಹಣೆ ಸಿಸ್ಟಂ ಎಂಜಿನಿಯರ್ ಹುದ್ದೆಗೆ ಆಯ್ಕೆ ಮಾಡಿರುವ ಕಂಪನಿ ವಾರ್ಷಿಕ 1 ಲಕ್ಷ ಡಾಲರ್ ಅಥವಾ 70 ಲಕ್ಷ ರೂಪಾಯಿ ವೇತನದ ಆಫರ್ ನೀಡಿದೆ.

ಇದು ವಿಶ್ವವಿದ್ಯಾನಿಲಯ ಆರಂಭವಾದಾಗಿನಿಂದ ಇಲ್ಲಿನ ಯಾವುದೇ ವಿದ್ಯಾರ್ಥಿ ಗಳಿಸಿದ ಗರಿಷ್ಠ ವೇತನವಾಗಿದೆ. ಅಲಿಯ ತಂದೆ ಶಂಶಾದ್ ಅಲಿ ಜೆಎಂಐನಲ್ಲಿ ಎಲೆಕ್ಟ್ರೀಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News