×
Ad

ಮಲ್ಪೆ: ವಿದ್ಯುತ್ ಆಘಾತ; ಮೃತ ಯುವಕರ ಮನೆಗೆ ಸಚಿವೆ ಜಯಮಾಲಾ ಭೇಟಿ

Update: 2018-08-23 22:05 IST

ಉಡುಪಿ, ಆ.23: ಮಲ್ಪೆ ಸಮೀಪದ ಕೆಮ್ಮಣ್ಣು ಗ್ರಾಮದ ಫರಂಗಿಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕೀರ್ತನ್ ಪುತ್ರನ್ (21) ಹಾಗೂ ರಾಕೇಶ್ ಬೆಳ್ಚಡರ(27) ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಗುರುವಾರ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮೊದಲು ಪಡುಕುದ್ರುವಿನ ಕೀರ್ತನ್ ಮನೆಗೆ ಭೇಟಿ ನೀಡಿದ ಸಚಿವೆ, ಮೃತ ಕೀರ್ತನ್‌ರ ತಂದೆ, ತಾಯಿ ಹಾಗೂ ಅವರ ಬಂಧುಗಳಿಗೆ ಸಾಂತ್ವನ ಹೇಳಿದರು. ಬಳಿಕ ರಾಕೇಶ್ ಬೆಳ್ಚಡರ ಬಾಳಿಗರಕುದ್ರುವಿನ ಮನೆಗೆ ಭೇಟಿ ನೀಡಿ ಮೃತರ ತಂದೆ, ತಾಯಿ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮೆಸ್ಕಾಂ ಇಲಾಖೆಯ ವತಿಯಿಂದ ತಕ್ಷಣ 5 ಲಕ್ಷ ರೂ.ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಭೇಟಿಯ ಬಳಿಕ ತಿಳಿಸಿದರು. ಈ ಭೇಟಿಯ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಡಿಸಿಸಿ ಅಧ್ಯಕ್ಷ ಜನಾರ್ದನ ತೋನ್ಸೆ ಮತ್ತಿತರರು ಉಪಸ್ಥಿತರಿದ್ದರು.

ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ: ಜನವಸತಿ ಪ್ರದೇಶದಲ್ಲಿ ಕಡಿದು ಬಿದ್ದಿರುವ ವಿದ್ಯುತ್ ತಂತಿಗಳನ್ನು ಹಾಗೂ ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ತಕ್ಷಣ ತೆರವುಗೊಳಿಸುವಂತೆ ಸಚಿವರು ಸ್ಥಳದಲ್ಲಿಯೇ ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News