×
Ad

ಮೂರನೇ ಮದುವೆಗೆ ಯತ್ನ: ಆರೋಪಿ ಸೆರೆ

Update: 2018-08-24 22:24 IST

ಮಂಗಳೂರು, ಆ. 24: ಎರಡು ಮದುವೆಯಾದದ್ದಲ್ಲದೆ, ಆ ಸಂಬಂಧ ಮುರಿದು ಬಿದ್ದ ಬಳಿಕ ಮೂರನೇ ಮದುವೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಜಪ್ಪಿನಮೊಗರು ಕರಂಬೆಟ್ಟು ನಿವಾಸಿ ಅಶೋಕ್ ಎಲ್. ಸುವರ್ಣ (40) ಬಂಧಿತ ಆರೋಪಿ. ಆರೋಪಿಗೆ ಸಹಕರಿಸಿದ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸುತಿದ್ದಾರೆ.

ಪ್ರಕರಣ ವಿವರ: ಆರೋಪಿ ಅಶೋಕ್ ಎಲ್. ಸುವರ್ಣನಿಗೆ ಈ ಹಿಂದೆಯೇ ಎರಡು ಮದುವೆಯಾಗಿದ್ದು, ಅದನ್ನು ಮುಚ್ಚಿಟ್ಟು ಮೂರನೇ ಮದುವೆಗೆ ಪ್ರಯತ್ನ ನಡೆಸಲಾಗಿತ್ತು.  ಮದುವೆ ಬಗ್ಗೆ ಮಾತನಾಡಲು ಅಶೋಕ್ ಎಲ್. ಸುವರ್ಣನ ಸಹೋದರಿಯರಾದ ಕುಮುದಾ ಮತ್ತು ವೀಣಾ ಎಂಬವರು ಮುಲ್ಕಿಯ ವಧುವಿನ ತಾಯಿಯ ಜತೆ ಮಾತುಕತೆ ನಡೆಸಿದ್ದರು. ಅಶೋಕ್‌ನ ಸಂಬಂಧಿಕರ ಬಣ್ಣದ ಮಾತನ್ನು ನಂಬಿದ ಯುವತಿ ಕಡೆಯವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಸಂದೇಹ ಹುಟ್ಟಿದ್ದು ಹೇಗೆ?: ಆರೋಪಿ ಅಶೋಕನ ಸಂಬಂಧಿಕರು ನಿಶ್ಚಿತಾರ್ಥ ಮತ್ತು ಮದುವೆಗೆ ಆತುರಪಡುತ್ತಿದ್ದು, ಆ.24ರಂದು ನಿಶ್ಚಿತಾರ್ಥಪಡಿಸಿ, ಆ.26ರಂದು ಮದುವೆಗೂ ದಿನಾಂಕ ಗೊತ್ತುಪಡಿಸಿದರು. ಇದು ಯುವತಿಯ ಸಂಬಂಧಿಕರ ಸಂದೇಹಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆತನಿಗೆ ಈ ಹಿಂದೆಯೇ ಎರಡು ಮದುವೆಯಾಗಿ, ಮಗುವಿರುವ ವಿಷಯ ಗೊತ್ತಾಗಿದೆ. ಆರೋಪಿಯ ಇಬ್ಬರು ಹೆಂಡತಿಯರು ಕೂಡ ಆತನ ಜತೆಯಿಲ್ಲ ಎಂದು ತಿಳಿದುಬಂದಿದೆ.

ಯುವತಿ ಕಡೆಯವರು ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಸತ್ಯಾಂಶವನ್ನು ಮುಚ್ಚಿಟ್ಟು ಮದುವೆಗೆ ಆರೋಪಿಗೆ ಸಹಕರಿಸಿದ ಕುಮುದಾ ಮತ್ತು ವೀಣಾ ವಿರುದ್ಧವೂ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News