ಹವಾಯಿ ದ್ವೀಪಕ್ಕೆ ಅಪ್ಪಳಿಸಿದ ಚಂಡಮಾರುತ ‘ಲೇನ್’

Update: 2018-08-24 17:13 GMT
ಸಾಂದರ್ಭಿಕ ಚಿತ್ರ

ಹೊನೊಲುಲು (ಹವಾಯಿ ದ್ವೀಪ), ಆ. 24: ಪ್ರಬಲ ಚಂಡಮಾರುತ ‘ಲೇನ್’ ಅಮೆರಿಕದ ಹವಾಯಿ ದ್ವೀಪಕ್ಕೆ ಗುರುವಾರ ಅಪ್ಪಳಿಸಿದೆ.

ಭಾರೀ ವೇಗದ ಗಾಳಿ ಬೀಸುತ್ತಿದ್ದು ಮುಸಲಧಾರೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ ಹಾಗೂ ದಿಢೀರ್ ಪ್ರವಾಹ ಕಾಣಿಸಿಕೊಂಡಿದೆ. ಹಲವು ಕಡೆಗಳಲ್ಲಿ ರಸ್ತೆಗಳು ಮುಚ್ಚಿವೆ.

ಕೈಲುವ-ಕೋನ ನಗರದಿಂದ ನೈರುತ್ಯಕ್ಕೆ 280 ಕಿ.ಮೀ. ದೂರದಲ್ಲಿ ಪೆಸಿಫಿಕ್ ಸಾಗರದಲ್ಲಿ ರೂಪುಗೊಂಡ ಚಂಡಮಾರುತದಿಂದಾಗಿ ಹವಾಯಿಯ ಬಿಗ್ ಐಲ್ಯಾಂಡ್‌ನಲ್ಲಿ 51 ಸೆಂಟಿ ಮೀಟರ್ ಮಳೆ ಸುರಿದಿದೆ.

‘‘ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ಭಾರೀ ಪ್ರಮಾಣದಲ್ಲಿ ತೇವಾಂಶವಿದೆ. ಗಂಟೆಗೆ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ’’ ಎಂದು ರಾಷ್ಟ್ರೀಯ ಹವಾಮಾನ ಇಲಾಖೆಯ ಚೆವಿ ಚೆವಲಿಯರ್ ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್

ಚಂಡಮಾರುತದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದ್ವೀಪದಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಿದ್ದಾರೆ.

 ಹವಾಯಿ ದ್ವೀಪದ ದಕ್ಷಿಣಕ್ಕೆ 320 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿರುವ ‘ಲೇನ್’ ಪ್ರಬಲ ಚಂಡಮಾರುತವಾಗಿ ಮುಂದುವರಿದಿದೆ. ಆರಂಭದಲ್ಲಿ ಅದು ಗಂಟೆಗೆ 209 ಕಿಲೋಮೀಟರ್‌ಗಿಂತಲೂ ಅಧಿಕ ವೇಗದ ಗಾಳಿಯನ್ನು ಹೊಂದಿತ್ತು. ಬಳಿಕ ಗಾಳಿಯ ತೀವ್ರತೆ ಕಡಿಮೆಯಾಗಿದೆ.

ಹಾಗಾಗಿ, ಸ್ಥಳೀಯ ಸಮಯ ಮಧ್ಯಾಹ್ನದ ವೇಳೆಗೆ ಚಂಡಮಾರುತದ ತೀವ್ರತೆಯನ್ನು 3ಕ್ಕೆ ಇಳಿಸಲಾಯಿತು.

ಆತಂಕದಿಂದ ಜೀವಿಸುತ್ತಿರುವ ಜನತೆ

ಅಮೆರಿಕ ಪ್ರಧಾನ ನೆಲದಿಂದ ನೈರುತ್ಯಕ್ಕೆ 3219 ಕಿ.ಮೀ. ದೂರದಲ್ಲಿರುವ ಹವಾಯಿ ದ್ವೀಪಗಳ ಅತ್ಯಂತ ಸಮೀಪದಿಂದ ಅಥವಾ ಅವುಗಳ ಮೇಲಿನಿಂದಾಗಿ ಚಂಡಮಾರುತದ ಕೇಂದ್ರ ಬಿಂದು ಹಾದು ಹೋಗುವುದೆಂದು ನಿರೀಕ್ಷಿಸಲಾಗಿದೆ.

ಗುರುವಾರ ಮುಂಜಾನೆಗೆ ಮುನ್ನ 30 ಸೆಂಟಿಮೀಟರ್‌ನಷ್ಟು ಭಾರೀ ಮಳೆ ದ್ವೀಪದಲ್ಲಿ ಸುರಿದಿದೆ. ಮುಂದಿನ 4-5 ದಿನಗಳಲ್ಲಿ ಅತಿ ಹೆಚ್ಚು ಪೀಡಿತ ಪ್ರದೇಶಗಳಲ್ಲಿ 76 ಸೆಂಟಿಮೀಟರ್‌ನಷ್ಟು ಮಳೆ ಸುರಿಯುವುದೆಂದು ನಿರೀಕ್ಷಿಸಲಾಗಿದೆ.

ತುರ್ತು ಪರಿಸ್ಥಿತಿ ನಿಭಾಯಿಸುವ ತಂಡಗಳು 16 ಪರಿಹಾರ ಶಿಬಿರಗಳನ್ನು ರಚಿಸಿವೆ ಹಾಗೂ ಇನ್ನೂ 19 ಶಿಬಿರಗಳನ್ನು ನಿರ್ಮಿಲಾಗುತ್ತಿದೆ.

ದ್ವೀಪಾದ್ಯಂತ ಎಲ್ಲರ ಮುಖಗಳಲ್ಲಿ ಕಳವಳ ಎದ್ದು ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News