ಆಸ್ಟ್ರೇಲಿಯ: ಸ್ಕಾಟ್‌ಮೊರಿಸನ್ ನೂತನ ಪ್ರಧಾನಿ

Update: 2018-08-24 17:19 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ಆ. 24: ಆಸ್ಟ್ರೇಲಿಯದ ಹಣಕಾಸು ಸಚಿವ ಸ್ಕಾಟ್ ಮೊರಿಸನ್ ನೂತನ ಪ್ರಧಾನಿಯಾಗಲಿದ್ದಾರೆ. ಹಾಲಿ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ಪಕ್ಷದ ಬೆಂಬಲವನ್ನು ಕಳೆದುಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.

ಶುಕ್ರವಾರ ನಡೆದ ಲಿಬರಲ್ ಪಾರ್ಟಿಯ ನಾಯಕತ್ವ ಮತದಾನದಲ್ಲಿ ಅವರು ವಿಜಯಿಯಾಗಿದ್ದಾರೆ.

ಲಿಬರಲ್ ಪಾರ್ಟಿಯವರೇ ಆದ ಹಾಲಿ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ಪಕ್ಷದ ಬಹುಮತದ ಬೆಂಬಲವನ್ನು ಕಳೆದುಕೊಂಡ ಬಳಿಕ, ಹೊಸ ನಾಯಕನ ಆಯ್ಕೆಗಾಗಿ ಪಕ್ಷದ ಸಭೆಯೊಂದನ್ನು ಕರೆದಿದ್ದರು.

ಈ ಸಭೆಯಲ್ಲಿ ನಡೆದ ಮತದಾನದಲ್ಲಿ ಸ್ಕಾಟ್ ಮೊರಿಸನ್ ಮಾಜಿ ಗೃಹ ವ್ಯವಹಾರಗಳ ಸಚಿವ ಪೀಟರ್ ಡ್ಯೂಟನ್‌ರನ್ನು 45-40 ಮತಗಳ ಅಂತರದಿಂದ ಸೋಲಿಸಿದರು. ವಿದೇಶ ಸಚಿವೆ ಜೂಲೀ ಬಿಶಪ್ ಕೂಡ ಪಕ್ಷದ ನಾಯಕತ್ವ ಸ್ಪರ್ಧೆಯಲ್ಲಿದ್ದರು.

ಲಿಬರಲ್ ಪಾರ್ಟಿಯು ಸಂಪ್ರದಾಯವಾದಿ ಲಿಬರಲ್-ನ್ಯಾಶನಲ್ ಸಮ್ಮಿಶ್ರ ಸರಕಾರದ ಹಿರಿಯ ಭಾಗೀದಾರ ಪಕ್ಷವಾಗಿದೆ.

 ಇತ್ತೀಚಿನ ದಿನಗಳಲ್ಲಿ ಆಡಳಿತಾರೂಢ ಪಕ್ಷವು ಜನರ ಅವಕೃಪೆಗೆ ತುತ್ತಾಗಿರುವುದನ್ನು ಸ್ಮರಿಸಬಹುದಾಗಿದೆ. ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ ಹಾಗೂ ಜನಮತ ಸಮೀಕ್ಷೆಯಲ್ಲಿ ಪಕ್ಷವು ಹಿಂದುಳಿದಿತ್ತು. ಇದು ಆಡಳಿತಾರೂಢ ಪಕ್ಷದ ಸಂಸದರ ಆತಂಕಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News