ಹೇಳಿಕೆ ಸರಿಪಡಿಸುವಂತೆ ಅಮೆರಿಕಕ್ಕೆ ಪಾಕಿಸ್ತಾನ ಸೂಚನೆ

Update: 2018-08-24 17:22 GMT

ಇಸ್ಲಾಮಾಬಾದ್, ಆ. 24: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಅಮೆರಿಕದ ವಿದೇಶಾಂಗ ಇಲಾಖೆ ಹೊರಡಿಸಿದ ಹೇಳಿಕೆಯೊಂದನ್ನು ಸರಿಪಡಿಸುವಂತೆ ಪಾಕಿಸ್ತಾನ ಗುರುವಾರ ಅಮೆರಿಕಕ್ಕೆ ಸೂಚಿಸಿದೆ.

ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಎಲ್ಲ ಭಯೋತ್ಪಾದಕರ ವಿರುದ್ಧ ‘ನಿರ್ಣಾಯಕ ಕ್ರಮ’ಗಳನ್ನು ತೆಗೆದುಕೊಳ್ಳುವಂತೆ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಪಾಕಿಸ್ತಾನದ ನೂತನ ಪ್ರಧಾನಿಗೆ ಸೂಚಿಸಿದ್ದಾರೆ ಎಂಬುದಾಗಿ ಅಮೆರಿಕದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಮ್ರಾನ್ ಖಾನ್ ಜೊತೆ ನಡೆಸಿದ ಮಾತುಕತೆಯಲ್ಲಿ, ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಎಲ್ಲ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯ ಹಾಗೂ ಅಫ್ಘಾನ್ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ವಹಿಸಬೇಕಾದ ಮಹತ್ವದ ಪಾತ್ರವನ್ನು ಪ್ರಸ್ತಾಪಿಸಿದರು ಎಂದು ಹೇಳಿಕೆ ತಿಳಿಸಿದೆ.

ಆದಾಗ್ಯೂ, ಉಭಯ ನಾಯಕರ ನಡುವಿನ ಸಂಭಾಷಣೆಯ ವೇಳೆ, ಪಾಂಪಿಯೊ, ಇಮ್ರಾನ್‌ರನ್ನು ಅಭಿನಂದಿಸಿದರು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತಾದರೂ, ‘ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರ’ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದು ಪಾಕಿಸ್ತಾನದ ವಿದೇಶ ಕಚೇರಿ ಹೇಳಿದೆ.

‘‘ಪ್ರಧಾನಿ ಖಾನ್ ಮತ್ತು ಅಮೆರಿಕ ವಿದೇಶ ಕಾರ್ಯದರ್ಶಿ ನಡುವಿನ ಇಂದಿನ ಫೋನ್ ಸಂಭಾಷಣೆಯ ಬಗ್ಗೆ ಅಮೆರಿಕ ವಿದೇಶಾಂಗ ಇಲಾಖೆ ಹೊರಡಿಸಿದ ತಪ್ಪು ಹೇಳಿಕೆಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸುತ್ತದೆ’’ ಎಂದು ವಿದೇಶ ಕಚೇರಿಯ ವಕ್ತಾರ ಮುಹಮ್ಮದ್ ಫೈಝಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News