ಅಮೆರಿಕವನ್ನು ಟೀಕಿಸಿದ ಫೆಲೆಸ್ತೀನಿಯರ ವಿರುದ್ಧ ಸೇಡು: ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಗೆ ನಿಧಿ ಕಡಿತ

Update: 2018-08-24 17:35 GMT

ಜೆರುಸಲೇಮ್, ಆ. 24: ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡಿದ ತನ್ನ ಕ್ರಮವನ್ನು ಟೀಕಿಸಿದ ಫೆಲೆಸ್ತೀನಿಯರನ್ನು ಶಿಕ್ಷಿಸಲು ಅಮೆರಿಕ, ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದೆ ಎಂದು ಅದರ ಮುಖ್ಯಸ್ಥ ಪಿಯರಿ ಕ್ರಾಹನ್‌ಬೂಹಲ್ ಹೇಳಿದ್ದಾರೆ.

ಆದರೆ, ಫೆಲೆಸ್ತೀನ್ ನಿರಾಶ್ರಿತ ಸಮಸ್ಯೆ ಹೋಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

‘‘50 ಲಕ್ಷ ಜನರು ತೊಲಗಲಿ ಎಂಬುದಾಗಿ ಯಾರೂ ಭಾವಿಸುವಂತಿಲ್ಲ’’ ಎಂದು ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾಮಗಾರಿ ಸಂಸ್ಥೆಯ ಕಮಿಶನರ್ ಪಿಯರಿ ‘ಅಸೋಸಿಯೇಟಡ್ ಪ್ರೆಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

ಈ ಸಂಸ್ಥೆಗೆ ಅಮೆರಿಕ ಅತಿ ಹೆಚ್ಚು ದೇಣಿಗೆ ನೀಡುತ್ತಿತ್ತು. ಆದರೆ, ಈ ವರ್ಷದ ಜನವರಿಯಲ್ಲಿ ಅದು ತನ್ನ ವಾರ್ಷಿಕ ದೇಣಿಗೆಯಿಂದ 300 ಮಿಲಿಯ ಡಾಲರ್ (ಸುಮಾರು 2,100 ಕೋಟಿ ರೂಪಾಯಿ) ಮೊತ್ತವನ್ನು ಕಡಿತಗೊಳಿಸಿತ್ತು.

ಇದರಿಂದಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾಮಗಾರಿ ಸಂಸ್ಥೆಯು ಹಿಂದೆಂದೂ ಇರದಷ್ಟು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಇತರ ದೇಶಗಳಿಂದ ಹಣ ಸಂಗ್ರಹಿಸಿ ಕೊರತೆಯ ಒಂದು ಭಾಗವನ್ನು ತುಂಬಿಸಿದರಾದರೂ, ಅದು ಈಗಲೂ 200 ಮಿಲಿಯ ಡಾಲರ್ (ಸುಮಾರು 1,400 ಕೋಟಿ ರೂಪಾಯಿ) ಕೊರತೆಯನ್ನು ಎದುರಿಸುತ್ತಿದೆ.

ಅದು ಇತ್ತೀಚೆಗೆ ಗಾಝಾ ಪಟ್ಟಿಯಲ್ಲಿ 100ಕ್ಕೂ ಅಧಿಕ ಜನರನ್ನು ಕೆಲಸದಿಂದ ಬಿಡಿಸಿತು ಹಾಗೂ ಇತರ ಉದ್ಯೋಗಿಗಳ 500 ಗಂಟೆಗಳ ಕೆಲಸದ ಅವಧಿಯನ್ನು ಕಡಿತಗೊಳಿಸಿತು.

ಮಧ್ಯಪ್ರಾಚ್ಯದಾದ್ಯಂತ ಇರುವ ಫೆಲೆಸ್ತೀನ್ ನಿರಾಶ್ರಿತರ ಲಕ್ಷಾಂತರ ಮಕ್ಕಳ ಮುಂದಿನ ಶಾಲಾ ವರ್ಷಕ್ಕೆ ಬೆದರಿಕೆ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News