ಚಾಲಕನೋರ್ವರ ವರ್ಗಾವಣೆ ಆದೇಶ ರದ್ದು: ಶಾಸಕರಿಂದ ಧರಣಿ

Update: 2018-08-24 17:37 GMT

ಬಂಟ್ವಾಳ, ಆ. 24: ತನ್ನ ಲಿಖಿತ ಕೋರಿಕೆಯಂತೆ ಚಾಲಕನೋರ್ವರ ವರ್ಗಾವಣೆ ಆದೇಶ ನೀಡಿದ್ದರೂ ಅದನ್ನು ರದ್ದುಪಡಿಸಿ ಅವಮಾನಿಸಲಾಗಿದೆ. ಅಲ್ಲದೆ, ಶಾಸಕರ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಲಾಗಿದೆ ಎಂದು ಆರೋಪಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಉಳಿಪ್ಪಾಡಿ ಅವರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಜಣ್ಣ ಅವರ ಕಚೇರಿಯಲ್ಲಿ ಶುಕ್ರವಾರ ಸಂಜೆ ಧರಣಿ ಕುಳಿತರು.

ಇದಕ್ಕೆ ಪೂರಕವಾಗಿ ಬಂಟ್ವಾಳ ತಾಪಂನ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಅವರ ವಾಹನ ಚಾಲಕ ಫ್ರಾನ್ಸಿಸ್ ಎಂಬವರು ಜು. 31ರಂದು ನಿವೃತ್ತಿ ಹೊಂದಿರುತ್ತಾರೆ. ನಿವೃತ್ತಿಯಿಂದ ತೆರವು ಆಗುವ ಈ ಸ್ಥಾನಕ್ಕೆ ಮಂಗಳೂರು ತಾಲೂಕು ಪಂಚಾಯತ್‌ನ ವಾಹನ ಚಾಲಕರಾಗಿದ್ದ ಮೂಲತಃ ಬಂಟ್ವಾಳದವರಾಗಿರುವ, 18 ವರ್ಷಗಳಿಂದ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಶೋಕ್ ಕುಮಾರ್ ನಾಯ್ಕಿ ಎಂಬವರ ವಿನಂತಿಯ ಮೇರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಉಳಿಪ್ಪಾಡಿಯವರು ತೆರವು ಆಗುವ ಸ್ಥಾನಕ್ಕೆ ಅಶೋಕ್ ಕುಮಾರ್ ನಾಯ್ಕೆಅವರನ್ನು ವರ್ಗಾಯಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರಿಗೆ ಲಿಖಿತ ಕೋರಿಕೆಯನ್ನು ಸಲ್ಲಿಸಿದ್ದರು. ಶಾಸಕರ ಕೋರಿಕೆಯ ಮೇರೆಗೆ ಅಶೋಕ್ ಕುಮಾರ್ ನಾಯ್ಕೆ ಅವರನ್ನು ತಾತ್ಕಾಲಿಕ ನಿಯೋಜನೆಯಡಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರು ವರ್ಗಾಯಿಸಿ ಆದೇಶಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಜಿಪಂ ಸಿಎಸ್ ಅವರ ಆದೇಶದ ಮೇರೆಗೆ ಆ.21ರಂದು ಅಶೋಕ್ ಕುಮಾರ್ ನಾಯ್ಕರವರು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಆ. 23ರಂದು ಅಶೋಕ್ ಕುಮಾರ್ ನಾಯ್ಕರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಲ್ಲದೆ, ಅವರ ಸ್ಥಾನಕ್ಕೆ ಈ ಹಿಂದೆ ನಿವೃತ್ತಿ ಹೊಂದಿದ್ದ ಫ್ರಾನ್ಸಿಸ್‌ರವರನ್ನು ನಿಯಮಬಾಹಿರವಾಗಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕೆ ಆರೋಪಿಸಿದರು.

ದ.ಕ.ಜಿ.ಪ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರು ಅಶೋಕ್ ಕುಮಾರ್ ನಾಯ್ಕರವರ ನಿಯೋಜನೆಯನ್ನು ರದ್ದು ಪಡಿಸಿ ಆದೇಶಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕೆ ಯಾರು ಕಾರಣ ಎಂದು ತಾಪಂ ಇಒ ರಾಜಣ್ಣ ಅವರಲ್ಲಿ ಪ್ರಶ್ನಿಸಿದ ಶಾಸಕ, ಜನಪ್ರತಿನಿಧಿಯಾದ ನನ್ನನ್ನೇ ಮೋಸ ಮಾಡಲಾಗಿದೆ. ಇದು ಶಾಸಕನಾದ ತನಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ನಳಿನ್ ಭೇಟಿ:

ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಸಂಸದ ನಳಿನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಶಾಸಕರಿಗೆ ಅವಮಾನ ಮಾಡಲಾಗಿದೆ, ಅವರ ಮನವಿಯನ್ನು ತಿರಸ್ಕರಿಸಿ ನಿವೃತ್ತ ಚಾಲಕನನ್ನು ನಿಯುಕ್ತಿಗೊಳಿಸಿರುವುದು ಸರಿಯಲ್ಲ, 20 ದಿನಗಳಲ್ಲಿ ಆತನ ಕೈಗೆ ವಾಹನವನ್ನು ಕೊಡಲಾಗಿದ್ದು, ಎಲ್ಲ ವಿಷಯಗಳ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು 28ಕ್ಕೆ ತನ್ನ ಮತ್ತು ಶಾಸಕರಿಗೆ ವಿವರಣೆ ನೀಡಬೇಕು, ಇಲ್ಲವಾದಲ್ಲಿ 29ರಂದು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಂಟ್ವಾಳದ ಶಾಸಕರ ಯಾರು?:

ನಮ್ಮ ಶಾಸಕರು ಯಾರು ಎಂದು ಜನರು ಕೇಳುತ್ತಿದ್ದಾರೆ. ಯಾವುದೇ ಚುನಾಯಿತ ಜನಪ್ರತಿನಿಧಿ ಅಲ್ಲದವರು ನೀಡುವ ಆದೇಶಗಳಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಮುಖಂಡರಾದ ಎ.ಗೋವಿಂದ ಪ್ರಭು ಮತ್ತು ದೇವದಾಸ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಬಂಟ್ವಾಳ ತಾಪಂ ಇಒ ಅವರು ಬಂಟ್ವಾಳ ಶಾಸಕ ರಾಜೇಶ್ ಅವರ ಮಾತಿಗೆ ಮನ್ನಣೆಯನ್ನು ನೀಡದೇ ಅಗೌರವ ತೋರಿದ್ದಾರೆ. ಅಲ್ಲದೆ, ಶಾಸಕರ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ದೂರಿದರು.

ಈ ಸಂದರ್ಭ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಇಒ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ರಜೆಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಯಿತು. ಬಳಿಕ ಅಧಿಕಾರಿ ಎಂ.ವಿ.ನಾಯಕ್ ಸ್ಥಳಕ್ಕೆ ಆಗಮಿಸಿದಾಗ ಮಾತನಾಡಿದ ಶಾಸಕರು ಸ್ಪಷ್ಟನೆ ನೀಡುವಂತೆ ಕೋರಿದರು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯ ತುಂಗಪ್ಪ ಬಂಗೇರ, ಬಿಜೆಪಿ ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ಎ.ಗೋವಿಂದ ಪ್ರಭು, ದಿನೇಶ್ ಅಮ್ಟೂರು, ಪ್ರಭಾಕರ ಪ್ರಭು, ಯಶವಂತ ಪೊಳಲಿ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟ್ಟು, ಸುಗುಣ ಕಿಣಿ, ಪ್ರಮೋದ್ ಅಜ್ಜಿಬೆಟ್ಟು, ರಮಾನಾಥ ರಾಯಿ, ವಜ್ರನಾಥ ಕಲ್ಲಡ್ಕ ಸಹಿತ ಪಕ್ಷದ ಪ್ರಮುಖರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸತೊಡಗಿದ ಸಂದರ್ಭ ಬಂಟ್ವಾಳ ಪೊಲೀಸರು ಬಂದೋಬಸ್ತ್‌ಗೆ ಬರಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News