×
Ad

ಅನಧಿಕೃತ ಪಾರ್ಕಿಂಗ್‌ಗೆ ಅವಕಾಶ ನೀಡಿದರೆ ಹೊಟೇಲ್, ಅಂಗಡಿ ಮಾಲಕರ ವಿರುದ್ಧವೂ ಕ್ರಮ

Update: 2018-08-24 23:18 IST

ಮಂಗಳೂರು, ಆ.24: ನಗರದಲ್ಲಿ ಹೊಟೇಲ್, ಅಂಗಡಿ ಮುಂಗಟ್ಟುಗಳ ಎದುರು ಪಾರ್ಕಿಂಗ್ ಮಾಡುವ ವಾಹನ ಮಾಲಕರಿಗೆ ಮಾತ್ರವಲ್ಲದೆ ಹೊಟೇಲ್, ಅಂಗಡಿ ಮಾಲಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು.

ಫಳ್ನೀರ್‌ನಲ್ಲಿ ಹೊಟೇಲೊಂದರ ಬಳಿ ರಸ್ತೆಯಲ್ಲೇ ವಾಹನ ಪಾರ್ಕಿಂಗ್ ಮಾಡುವುದರಿಂದ ಅಲ್ಲಿನ ಆಸ್ಪತ್ರೆಗೆ ತೆರಳುವ ಆಂಬ್ಯುಲೆನ್ಸ್‌ಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸುರತ್ಕಲ್ ಹಾಗೂ ಉರ್ವ ಮಾರುಕಟ್ಟೆ ಬಳಿಯಲ್ಲೂ ಇಂತಹ ಸಮಸ್ಯೆ ಇದೆ ಎಂದು ಸಾರ್ವಜನಿಕರೊಬ್ಬರು ದೂರಿದರು.

ಪಡೀಲ್ ಜಂಕ್ಷನ್‌ನಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಆಟೋ ಚಾಲಕರು ನಿಗದಿತ ದರಕ್ಕಿಂತ ಅಧಿಕ ದರ ವಸೂಲಿ ಮಾಡುತ್ತಿದ್ದಾರೆ. ಪ್ರಶ್ನಿಸಿದರೆ ಉದ್ಧ್ದಟತನದಿಂದ ವರ್ತಿಸುತ್ತಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಅಂತಹ ಆಟೋ ರಿಕ್ಷಾಗಳ ನೋಂದಣಿ ಸಂಖ್ಯೆಯನ್ನು ದಾಖಲಿಸಿ ತಕ್ಷಣ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಪಿವಿಎಸ್, ಲಾಲ್‌ಭಾಗ್ ಮೊದಲಾದ ಕಡೆ ಸಿಗ್ನಲ್‌ಗಳ ಬಳಿ ಪೆನ್ನು, ಮೊಬೈಲ್ ಸ್ಟಾಂಡ್ ಮಾರಾಟ ಮಾಡುವವರ ಹಾವಳಿ ಹೆಚ್ಚಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿದೆ. ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

ಸ್ಟೇಟ್‌ಬ್ಯಾಂಕ್‌ನಿಂದ ಮರವೂರು ಮೂಲಕ ಸಾಗುವ ಕೆಲವು ಬಸ್ಸಿನವರು 9 ರೂ. ಹಾಗೂ ಇನ್ನು ಕೆಲವರು 10 ರೂ. ದರ ಪಡೆಯುತ್ತಿದ್ದಾರೆ. ಈ ತಾರತಮ್ಯ ಯಾಕೆ? ಎಂದು ಪ್ರಶ್ನಿಸಿದ ಮಹಿಳೆಯೊಬ್ಬರು, ಬಸ್‌ಗಳಲ್ಲಿ ಎದುರು ಭಾಗದಲ್ಲಿ ಗಂಡಸರು ನಿಂತುಕೊಳ್ಳುವುದರಿಂದ ಮಹಿಳೆಯರಿಗೆ ತೊಂದರೆಯಾಗುತ್ತದೆ ಎಂದು ದೂರಿದರು.

ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತ, ಪುರಭವನದ ಎದುರು ಸೆಂಟ್ರಲ್ ರೈಲ್ವೆ ನಿಲ್ದಾಣ ರಸ್ತೆ ಸೇರುವಲ್ಲಿ, ವಿವಿ ಕಾಲೇಜು ಎದುರು ಮೊದಲಾದ ಕಡೆ ಪಾದಚಾರಿಗಳಿಗೆ ರಸ್ತೆ ದಾಟಲು ತೀವ್ರ ತೊಂದರೆಯಾಗುತ್ತಿದೆ. ಅಲ್ಲಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರೊಬ್ಬರು ಒತ್ತಾಯಿಸಿದರು. ಈ ಬಗ್ಗೆ ಪಾಲಿಕೆಯ ಗಮನಕ್ಕೆ ತರುವುದಾಗಿ ಆಯುಕ್ತರು ಉತ್ತರಿಸಿದರು.

ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮೀಸಲಿಟ್ಟ ಸೀಟುಗಳನ್ನು ಬಿಟ್ಟು ಕೊಡಬೇಕು. ಈ ಬಗ್ಗೆ ಬಸ್ ನಿರ್ವಾಹಕರು ಗಮನ ವಹಿಸಲು ತಿಳಿಸುವಂತೆ ಬಸ್ ಮಾಲಕರ ಸಂಘದ ಅಧ್ಯಕ್ಷರಿಗೆ ಆಯುಕ್ತರು ಸೂಚಿಸಿದರು.

 ಡಿಸಿಪಿಗಳಾದ ಹನುಮಂತರಾಯ ಹಾಗೂ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ಅಮಾನುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News