ಹಾವು ಕಡಿದು ಮಡಂತ್ಯಾರು ಗ್ರಾಪಂ ಮಾಜಿ ಅಧ್ಯಕ್ಷೆ ಮೃತ್ಯು
Update: 2018-08-25 19:22 IST
ಬಂಟ್ವಾಳ, ಆ. 25: ಹಾವು ಕಡಿದು ಅಸ್ವಸ್ಥಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ಮಡಂತ್ಯಾರು ಗ್ರಾಪಂ ಮಾಜಿ ಅಧ್ಯಕ್ಷೆ, ಕುಕ್ಕಳ ಗ್ರಾಮದ ಹೊಸಮನೆ ನಿವಾಸಿ ಗೋಪಾಲ ಗೌಡ ಅವರ ಪತ್ನಿ ತುಂಗಾ ಗೋಪಾಲ್ (45) ಮೃತಪಟ್ಟವರು.
ಕಳೆದ ಜು. 30ರಂದು ಸಂಜೆ ತಮ್ಮ ತೋಟದಲ್ಲಿ ಅವರು ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವೊಂದು ಕಚ್ಚಿತ್ತು. ಚಿಕಿತ್ಸೆಗಾಗಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ತುಂಗಾ ಗೋಪಾಲ್ ಅವರು ಪುಂಜಾಲಕಟ್ಟೆ ಶ್ರೀಮುರುಘೇಂದ್ರ ವನಿತಾ ಸಮಾಜದ ಸದಸ್ಯೆ ಹಾಗೂ ಮಂಜಲಪಲ್ಕೆ ಜೈ ಹನುಮಾನ್ ಭಜನಾ ಮಂದಿರದ ಕಾರ್ಯದರ್ಶಿಯಾಗಿದ್ದರು. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.