ದ.ಕ.ಜಿಲ್ಲೆ ಕೇಸರಿಮಯವಾಗುವುದನ್ನು ತಡೆಯಲು ಪ್ರತಿಯೊಂದು ಮತವೂ ಅತ್ಯಗತ್ಯ: ದಿನೇಶ್ ಗುಂಡೂರಾವ್

Update: 2018-08-25 14:01 GMT

ಬಂಟ್ವಾಳ, ಆ. 25: ದ.ಕ. ಜಿಲ್ಲೆ ಕೇಸರಿಮಯವಾಗುವುದನ್ನು ತಡೆಯೊಡ್ಡಲು ಒಂದೊಂದು ಮತವೂ ಅತ್ಯಗತ್ಯವಾಗಿದ್ದು, ಬಂಟ್ವಾಳ ಪುರಸಭೆ ಫಲಿತಾಂಶ ಕಾಂಗ್ರೆಸ್ ಮುನ್ನಡೆಗೆ ದಿಕ್ಸೂಚಿಯಾಗಬೇಕಿದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶನಿವಾರ ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಗೆ ಮತ್ತು ಪುರಸಭೆ ಚುನಾವಣೆಯ ಅಭ್ಯರ್ಥಿಗಳಿಗೆ ಏರ್ಪಡಿಸಲಾದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಉತ್ತಮ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿದ್ದು, ಕಾರ್ಯಕರ್ತರು ಕಳೆದ ವಿಧಾನಸಭೆ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗೆ ಶ್ರಮಿಸಬೇಕು ಎಂದರು.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಭಾರೀ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸೌರ ಶಕ್ತಿಯ ಬಳಕೆ ವಿಚಾರದಲ್ಲಿ ರಾಜ್ಯ ಗಮನೀಯ ಸಾಧನೆ ಮಾಡಿದ್ದು, ಬಂಡವಾಳ ಹೂಡಿಕೆಯಲ್ಲೂ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಸುಮ್ಮನೆ ಕೂತು ವಾಟ್ಸ್ಆ್ಯಪ್‌ನಲ್ಲಿ ಫೋಟೊ ಶೇರ್ ಮಾಡಿದರೆ ಜನ ಮತ ಹಾಕುವುದಿಲ್ಲ. ಇದಕ್ಕಾಗಿ ಕಾರ್ಯಕರ್ತರು ಮನೆಮನೆಗೆ ಹೋಗಿ ಕೆಲಸ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿ ಕಾರ್ಯಗಳು ಎಲ್ಲ ಜನರನ್ನೂ ತಲುಪಿದೆ. ಇದೀಗ ಪುರಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜನರ ಬಳಿಗೆ ಹೋಗುವ ಅವಕಾಶ ಬಂದಿದೆ ಎಂದವರು, ಅಸ್ತಿತ್ವದ ಕಾರಣಕ್ಕೆ ನಮ್ಮೊಳಗೆ ಹೊಡೆದಾಟ ಮಾಡುವುದು ಬೇಕಾಗಿಲ್ಲ. ರಮಾನಾಥ ರೈ ನಾಯಕತ್ವದೊಂದಿಗೆ ಬಂಟ್ವಾಳ ಸಹಿತ ಕರಾವಳಿಯನ್ನು ಮತ್ತೆ ಕಾಂಗ್ರೆಸ್‌ಮಯ ಮಾಡಬೇಕಾಗಿದೆ ಎಂದರು.

ಕೇಂದ್ರದಲ್ಲಿ ನಾಲ್ಕೂವರೆ ವರ್ಷದಲ್ಲಿ ಮೋದಿ ಸರಕಾರ ಏನು ಮಾಡಿದೆ ಎಂದು ಪ್ರತಿಯೊಬ್ಬರೂ ಪ್ರಶ್ನೆ ಮಾಡಬೇಕಾಗಿದೆ. ಕೇವಲ ಘೋಷಣೆಗಳನ್ನು ಮುಂದಿಟ್ಟುಕೊಂಡು, ಸುಳ್ಳುಗಳೊಂದಿಗೆ ಜನರನ್ನು ಮರುಳು ಮಾಡುತ್ತಿದೆ. ಈ ಎಲ್ಲ ಸುಳ್ಳುಗಳನ್ನೂ ಜನರಿಗೆ ಮನದಟ್ಟು ಮಾಡುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರದ್ದು ಎಂದು ಹೇಳಿದರು.

ದೇವರ ಹೆಸರಿನಲ್ಲಿ ಸುಳ್ಳು ಹೇಳಿ ಮಾಡಿದ ಪಕ್ಷದಿಂದ ಈ ದೇಶ ಉದ್ದಾರವಾಗಲ್ಲ. ಕಾಂಗ್ರೆಸ್ ದೇಶ ಕಟ್ಟಿದ ಪಕ್ಷ, ಹಾಗಾಗಿ ಕಾರ್ಯಕರ್ತರು ಜನರ ಬಳಿ ತೆರಳಿ ನಿಜ ವಿಷಯನ್ನು ತಿಳಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಆಂತರಿಕ ಭಿನ್ನತೆ ನಿಲ್ಲಿಸಿ ಹೋರಾಟ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಜಿಪಂ ಸದಸ್ಯರಾದ ಬಿ. ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಮಮತಾ ಗಟ್ಟಿ, ಮಂಜುಳಾ ಮಾಧವ ಮಾವೆ, ಎಂ.ಎಸ್. ಮುಹಮ್ಮದ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಕ್ಷದ ಪ್ರಮುಖರಾದ ಬಿ.ಎಚ್. ಖಾದರ್, ಜಿ.ಎ.ಬಾವ, ಎಂ.ಎ. ಗಫೂರ್, ಪದ್ಮನಾಭ ರೈ, ಕೃಪಾ ಅಮರ್ ಆಳ್ವ, ರಾಜಶೇಖರ ಕೋಟ್ಯಾನ್, ಸವಿತಾ ರಮೇಶ್, ವೆಂಕಪ್ಪ ಗೌಡ, ಮಾಧವ ಮಾವೆ, ಮುಹಮ್ಮದ್ ನಂದಾವರ, ಪ್ರಶಾಂತ್ ಕುಲಾಲ್, ಬೇಬಿ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಪಕ್ಷದಲ್ಲಿರುವ ಎಲ್ಲರೂ ಕೆಟ್ಟವರಲ್ಲ. ಪಕ್ಷದ ಸಿದ್ಧಾಂತ ಅವರನ್ನು ಹಾಳು ಮಾಡಿದೆ. ಕರಾವಳಿಯಲ್ಲಿ ಬಿಜೆಪಿ ಅಪಪ್ರಚಾರದ ಮೂಲಕ ಗೆಲುವು ಸಾಧಿಸಿತು. ದ್ವೇಷ ಅಸೂಯೆಯ ರಾಜಕಾರಣ ಮಾಡಿ ನಮಗೆ ಸೋಲಾಗುವಂತೆ ಮಾಡಿತು.

- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ವೈಯಕ್ತಿಕವಾಗಿ ಸಂಘಪರಿವಾರಕ್ಕೆ ಟಾರ್ಗೆಟ್ ಆದ ನನಗೆ ಸೋಲಾಗಿದೆ: ರೈ
ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರು ಸದುದ್ದೇದ್ಧೇಶದಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪುರಸಭಾ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡಿ ವ್ಯಾಪ್ತಿಯ ಶೇ. 80 ಜನರನ್ನು ಸಂಪರ್ಕ ಮಾಡವ ಮೂಲಕ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿದ್ದೇನೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ನಾನು ವೈಯಕ್ತಿಕವಾಗಿ ಸಂಘಪರಿವಾರಕ್ಕೆ ಟಾರ್ಗೆಟ್ ಆಗಿದ್ದೆ. ಆ ಕಾರಣದಿಂದಲೇ ನನಗೆ ಸೋಲಾಗಿದೆ. ಪುರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದ ರೈ, ಹಂತಹಂತವಾಗಿ ರಾಜಕೀಯ ಬದುಕು ಪ್ರವೇಶ ಮಾಡಿದವನು. ಸೋಲು ಗೆಲುವು ಸಾಮಾನ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ರಾಜಕೀಯ ಮಾಡಲು ತಯಾರಾಗಿದ್ದೇನೆ. ಸೋತಾಗ ನಮ್ಮ ಜೊತೆ ಯಾರು ಇರುತ್ತಾರೆ ಅವರು ಮಾತ್ರ ನೈಜ ಕಾಂಗ್ರೆಸ್. ಮಾಹಿತಿ ತಂತ್ರಜ್ಞಾನ ಬೆಳೆದು ನಿಂತ ಈ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣ ಮೂಲಕ ಹೆಚ್ಚು ಪ್ರಚಾರಗಳಿಗೆ ಗಮನ ಕೊಡಲು ರೈ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News