ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಒತ್ತು: ನಾಗಾಲ್ಯಾಂಡ್ ರಾಜ್ಯಪಾಲ ಡಾ. ಪಿ.ಬಿ. ಆಚಾರ್ಯ

Update: 2018-08-25 14:05 GMT

ಕೊಣಾಜೆ, ಆ. 25: ಭಾರತ ಜಾಗತಿಕವಾಗಿ ಬಹು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಹಾಗಿದ್ದರೂ ಈಶಾನ್ಯ ರಾಜ್ಯಗಳು ತೀರ ಹತ್ತಿರದ ಸಂಪರ್ಕ ಹೊಂದಿರಲು ಸಾಧ್ಯವಾಗಲಿಲ್ಲ. ಒಂದರ್ಥದಲ್ಲಿ ಆ ರಾಜ್ಯಗಳ ಜೊತೆಗೆ ಹೆಚ್ಚಿನ ಸಂಪರ್ಕ ಕಲ್ಪಿಸಲು ಪ್ರಯತ್ನವೂ ಸಾಕಾಗಲಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರಕಾರ ದೇಶದ ಇತರ ರಾಜ್ಯಗಳಿಗೆ ಸಮಾನಾಗಿ ಆ ರಾಜ್ಯಗಳು ಕೂಡಾ ಎಲ್ಲ ಬಗೆಯಲ್ಲೂ ಬೆಳೆಯಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದು ಆ ಅವಶ್ಯಕತೆಯನ್ನು ಪೂರೈಸಲು ಎಲ್ಲ ವಿಧದಲ್ಲೂ ಹಂತಹಂತವಾಗಿ ಸಮಗ್ರ ಅಭಿವೃದ್ಧಿಗೊಳಿಸುವ ಯೋಜನೆ ಹಾಕಿಕೊಂಡಿದೆ ಎಂದು ನಾಗಾಲ್ಯಾಂಡ್ ರಾಜ್ಯಪಾಲ ಡಾ. ಪಿ.ಬಿ. ಆಚಾರ್ಯ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿಯೇ ಆರಂಭಿಸಿದ ಈಶಾನ್ಯ ರಾಜ್ಯಗಳ ಫೆಲೋಶಿಪ್ ಕಾರ್ಯಕ್ರಮದ ಅಧ್ಯಯನದ "ನಮಸ್ತೆ" ಸೆಂಟರ್ ನಡಿಯಲ್ಲಿ ಪದವೀಧರ ಹಾಗೂ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಟ್ಟೆ ವಿಶ್ವ್ವವಿದ್ಯಾಲಯ ಆರಂಭದಿಂದಲೂ ಈಶಾನ್ಯ ರಾಜ್ಯದ ಅರ್ಹ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಸಂಪೂರ್ಣ ಮನ್ನಾ ಮಾಡುತ್ತಿದೆ. ಅಂತಹ ಸುವರ್ಣ ಅವಕಾಶ ಕೊಟ್ಟಿರುವ ನಿಟ್ಟೆ ಶಿಕ್ಷಣ ಸಂಸ್ಥೆಗೆ ಅವರು ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಯೋಜನೆಯನ್ನು ಸದುಪಯೋಗಡಿಸಬೇಕು. ಈಶಾನ್ಯ ರಾಜ್ಯಗಳ ರಾಯಭಾರಿಗಳಂತಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸ್ವಾರ್ಥಕ್ಕಾಗಲೀ ಲಘುವಾಗಿ ಪರಿಗಣಿಸಬಾರದು. ನಮಸ್ತೆ ಸೆಂಟರ್‌ನ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರೈಸಿದ ಬಳಿಕ ತವರು ನಾಡಿನಲ್ಲಿ ಇತರ ವಿದ್ಯಾರ್ಥಿಗಳಿಗೆ ಸಹಕರಿಸುವ ಹಾಗೂ ನಾಡಿನ ಅಭಿವೃದ್ಧಿಯಲ್ಲಿ ದುಡಿಯುತ್ತಾ ಸಮಾಜಕ್ಕೆ ದೊಡ್ಡ ಕೊಡುಗೆಯಾಗಬೇಕು ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ, ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ, ಸಹ ಕುಲಪತಿ ಪ್ರೊ.ಡಾ. ಎಂ.ಎಸ್. ಮೂಡಿತ್ತಾಯ, ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ ಹಾಗೂ ನಮಸ್ತೆ ಸೆಂಟರ್ ಮುಖ್ಯಸ್ಥ ಡಾ. ಅನಿರ್ಬನ್ ಚಕ್ರಬರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News