ಕೇರಳದಲ್ಲಿ ಶತಮಾನದ ಮಳೆಯ ಬಳಿಕ ಊಹಾತೀತ ಅಪಾಯಗಳ ಬಗ್ಗೆ ಎಚ್ಚರಿಕೆ

Update: 2018-08-25 15:17 GMT

ತಿರುವನಂತಪುರ,ಆ.25: ಕೇರಳದಲ್ಲಿ ನೂರಾರು ಜೀವಗಳನ್ನು ಬಲಿ ಪಡೆದು,13 ಲಕ್ಷ ಜನರನ್ನು ನಿರ್ವಸಿತಗೊಳಿಸಿರುವ ಶತಮಾನದ ಮಳೆಯು ಜಾಗತಿಕ ತಾಪಮಾನವು ಎಗ್ಗಿಲ್ಲದೇ ಹೆಚ್ಚುತ್ತಿದ್ದರೆ ಅತ್ಯಂತ ಸಂಕಷ್ಟದ ಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದ ಹವಾಮಾನ ವಿಜ್ಞಾನಿಗಳ ಭವಿಷ್ಯಕ್ಕನುಗುಣವಾಗಿಯೇ ಸುರಿದಿದೆ.

ಹವಾಮಾನ ಬದಲಾವಣೆಗೂ ಕೇರಳದ ನೆರೆಯಂತಹ ಯಾವುದೇ ಏಕೈಕ ಪ್ರತಿಕೂಲ ಹವಾಮಾನ ಘಟನೆಗೂ ತಳುಕು ಹಾಕುವುದು ಕಠಿಣವಾಗುತ್ತದೆ ಎಂದು ಪುಣೆ ಸಮೀಪದ ಭಾರತೀಯ ಉಷ್ಣಪ್ರದೇಶ ಹವಾಮಾನ ಶಾಸ್ತ್ರ ಸಂಸ್ಥೆ(ಐಐಟಿಎಂ)ಯ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಕೋಲ್ ಹೇಳಿದರು. ಇದೇ ವೇಳೆ, 1950-2017ರ ಅವಧಿಯಲ್ಲಿ ವ್ಯಾಪಕವಾದ ಅತಿಯಾದ ಮಳೆ ಸುರಿಯುವಿಕೆಯ ಘಟನೆಗಳು ಮೂರು ಪಟ್ಟು ಹೆಚ್ಚಾಗಿ ಭಾರೀ ಪ್ರಮಾಣದ ಪ್ರವಾಹಗಳಿಗೆ ಕಾರಣವಾಗಿದೆ ಎನ್ನುವುದನ್ನು ನಮ್ಮ ಇತ್ತೀಚಿನ ಸಂಶೋಧನೆಯು ತೋರಿಸಿದೆ ಎಂದೂ ಅವರು ತಿಳಿಸಿದರು.

ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ ಕಳೆದ ವರ್ಷ ಪ್ರಕಟವಾಗಿರುವ ಕೋಲ್ ಸಹಲೇಖಕರಾಗಿದ್ದ ಅಧ್ಯಯನ ವರದಿಯು ಈ ಅವಧಿಯಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿದ್ದ ಪ್ರವಾಹಗಳಿಂದಾಗಿ 69,000 ಜನರು ಸಾವನ್ನಪಿದ್ದಾರೆ ಮತ್ತು 1.70 ಕೋ.ಜನರು ನಿರ್ವಸಿತರಾಗಿದ್ದರು ಎನ್ನುವುದನ್ನು ಬೆಟ್ಟು ಮಾಡಿದೆ.

ಕೇರಳದಲ್ಲಿ ಇಂದು ನಾವು ನೋಡುತ್ತಿರುವ ನೆರೆಯು ಮೂಲತಃ ಹವಾಮಾನ ಮುನ್ಸೂಚನೆಗಳಿಗೆ ಅನುಗುಣವಾಗಿಯೇ ಇದೆ ಎಂದು ತಿಳಿಸಿದ ಜರ್ಮನಿಯ ಪೋಸ್ಟ್‌ಡ್ಯಾಂ ಇನ್‌ಸ್ಟಿಟ್ಯೂಟ್ ಆಫ್ ಕ್ಲೈಮೇಟ್ ಇಂಪ್ಯಾಕ್ಟ್ ರೀಸರ್ಚ್‌ನ ವಿಜ್ಞಾನಿ ಕಿರಾ ವಿಂಕೆ ಅವರು,ಈಗಿನ ಪ್ರಮಾಣದಲ್ಲಿಯೇ ಹಸಿರುಮನೆ ಅನಿಲ ಹೊರಸೂಸುವಿಕೆ ಮುಂದುವರಿದರೆ ಊಹಿಸಲೂ ಸಾಧ್ಯವಾಗದ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ಅರಬ್ಬಿ ಸಮುದ್ರ ಮತ್ತು ಸಮೀಪದ ಪ್ರದೇಶಗಳು ತ್ವರಿತವಾಗಿ ಬಿಸಿಯಾಗುವುದು ಮಳೆ ಮಾರುತಗಳಲ್ಲಿ ಏರುಪೇರುಗಳಿಗೆ ಕಾರಣವಾಗುತ್ತದೆ ಮತ್ತು 3-4 ದಿನಗಳ ಅಲ್ಪಾವಧಿಯಲ್ಲಿ ಭೀಕರ ಮಳೆಯನ್ನುಂಟು ಮಾಡುತ್ತದೆ ಎಂದು ಕೋಲ್ ವಿವರಿಸಿದರು.

ಕಳೆದೊಂದು ದಶಕದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಭೂಮಿಯ ಅತಿಯಾದ ಬಿಸಿಯಾಗುವಿಕೆಯು ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಮುಂಗಾರು ಮಳೆಯು ತೀವ್ರಗೊಳ್ಳಲು ಕಾರಣವಾಗಿದೆ ಎಂದು ರಷ್ಯನ್ ಅಕಾಡಮಿ ಆಫ್ ಸೈನ್ಸಸ್‌ನ ಪ್ರೊ.ಎಲಿನಾ ಸುರೊವ್ಯಾಟ್ಕಿನಾ ಹೇಳಿದರು.

 ಈಗಿನ ಪ್ರವೃತ್ತಿಯನ್ನು ಪರಿಗಣಿಸಿದರೆ 2050ರ ವೇಳೆಗೆ ಭಾರತದ ಸರಾಸರಿ ವಾರ್ಷಿಕ ತಾಪಮಾನವು 1.5 ಡಿ.ಸೆಂಟಿಗ್ರೇಡ್‌ನಿಂದ 3 ಡಿ.ಸೆಂಟಿಗ್ರೇಡ್‌ನಷ್ಟು ಹೆಚ್ಚಲಿದೆ. ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಬದಲಾಗುತ್ತಿರುವ ಮಳೆಯ ಸ್ವರೂಪ ಮತ್ತು ಹೆಚ್ಚುತ್ತಿರುವ ತಾಪಮಾನವು ಭಾರತದ ಜಿಡಿಪಿಯನ್ನು ಶೇ.2.8ರಷ್ಟು ತಗ್ಗಿಸಲಿದೆ ಮತ್ತು ದೇಶದ ಜನಸಂಖ್ಯೆಯ ಅರ್ಧದಷ್ಟು ಜನರ ಜೀವನಮಟ್ಟ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News