ಇ-ಅಸೆಸ್‌ಮೆಂಟ್‌ಗೆ ಏಳು ವಿನಾಯಿತಿಗಳನ್ನು ಪ್ರಕಟಿಸಿದ ಆದಾಯ ತೆರಿಗೆ ಇಲಾಖೆ
ಹೊಸದಿಲ್ಲಿ,ಆ.25: ತನ್ನ ಕ್ಷೇತ್ರ ಅಧಿಕಾರಿಗಳಿಗೆ ನೂತನ ಮಾರ್ಗಸೂಚಿಗಳನ್ನು ಹೊರಡಿಸಿರುವ ಆದಾಯ ತೆರಿಗೆ ಇಲಾಖೆಯು ದೇಶಾದ್ಯಂತ ಹೊಸದಾಗಿ ಜಾರಿಗೊಳಿಸಿರುವ 2018-19ನೇ ಸಾಲಿಗಾಗಿ ಇ-ಅಸೆಸ್‌ಮೆಂಟ್ ಏಳು ವಿವಿಧ ಪ್ರಕರಣಗಳಲ್ಲಿ ಕಡ್ಡಾಯವಲ್ಲ ಎಂದು ತಿಳಿಸಿದೆ.
ಆದರೆ ತೆರಿಗೆ ಅಧಿಕಾರಿಗಳು ಈಗಲೂ ಈ ಪ್ರಕರಣಗಳಿಗಾಗಿ ಇಲಾಖೆಯ ವಿದ್ಯುನ್ಮಾನ ವೇದಿಕೆ ಇನ್‌ಕಂ ಟ್ಯಾಕ್ಸ್ ಬಿಸಿನೆಸ್ ಅಪ್ಲಿಕೇಷನ್(ಐಟಿಬಿಎ) ಮೂಲಕವೇ ಎಲ್ಲ ಇಲಾಖಾ ಸಂವಹನಗಳು ಮತ್ತು ನೋಟಿಸ್‌ಗಳನ್ನು ಸೃಷ್ಟಿಸಬೇಕಾಗುತ್ತದೆ ಎಂದು ಸೂಚನೆಗಳಲ್ಲಿ ತಿಳಿಸಲಾಗಿದೆ.
ಆದಾಯ ತೆರಿಗೆ ಕಾಯ್ದೆಯ ಕಲಂ 153ಎ,153ಸಿ,147 ಮತ್ತು 144ರಡಿ ರೂಪಿಸಲಾದ ತೆರಿಗೆ ನಿರ್ಧಾರಗಳಿಗೆ ಇ-ಅಸೆಸ್‌ಮೆಂಟ್ ಕಡ್ಡಾಯವಾಗಿರುವುದಿಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಆ.20ರ ತನ್ನ ಸುತ್ತೋಲೆಯಲ್ಲಿ ಹೇಳಿದೆ.
ತೆರಿಗೆ ನಿರ್ಧಾರವನ್ನು ಪಕ್ಕಕ್ಕಿರಿಸಿದ ಪ್ರಕರಣಗಳು, ಪಾನ್ ಇಲ್ಲದ ಪ್ರಕರಣಗಳಲ್ಲಿಯ ತೆರಿಗೆ ನಿರ್ಧಾರಗಳು, ಕಾಗದರೂಪದಲ್ಲಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿದ ಪ್ರಕರಣಗಳು,ಸಂಬಂಧಿತ ತೆರಿಗೆದಾರನು ಇ-ಫೈಲಿಂಗ್ ಖಾತೆಯನ್ನು ಹೊಂದಿರದ ಪ್ರಕರಣಗಳಲ್ಲಿಯೂ ಇ-ಅಸೆಸ್‌ಮೆಂಟ್ ಕಡ್ಡಾಯವಾಗಿರುವುದಿಲ್ಲ ಮತ್ತು ಸೀಮಿತ ಬ್ಯಾಂಡ್ ವಿಡ್ತ್ ಸಾಮರ್ಥ್ಯದ ಪ್ರದೇಶಗಳಿಗೂ ಇದು ಅನ್ವಯಿಸುತ್ತದೆ. ಅಲ್ಲದೆ ಫೆಬ್ರುವರಿಯಲ್ಲಿ ಇ-ಅಸೆಸ್‌ಮೆಂಟ್‌ಗಾಗಿ ಮೊದಲ ಸುತ್ತಿನ ಸೂಚನೆಗಳನ್ನು ಹೊರಡಿಸುವುದಕ್ಕೆ ಮುನ್ನ ಸಾಂಪ್ರದಾಯಿಕ ವಿಧಾನದಲ್ಲಿ ಈಗಾಗಲೇ ಸಾಕಷ್ಟು ವಿಚಾರಣೆ ನಡೆದಿರುವ ಪ್ರಕರಣಗಳಿಗೂ ಇ-ಅಸೆಸ್‌ಮೆಂಟ್ ಕಡ್ಡಾಯವಾಗಿರುವುದಿಲ್ಲ ಎಂದು ಇಲಾಖೆಯು ತಿಳಿಸಿದೆ.