ಪ್ರಯೋಗಾಲಯದಲ್ಲಿ ಮಾಂಸ ಬೆಳೆಸಿದರೆ ಹಿಂಸಾಚಾರ ನಿಲ್ಲಬಹುದು ಎಂದ ಮೇನಕಾ ಗಾಂಧಿ

Update: 2018-08-25 15:38 GMT

ಹೈದರಾಬಾದ್, ಆ.25: ಪ್ರಯೋಗಾಲಯದಲ್ಲಿ ಮಾಂಸ ಬೆಳೆಸುವುದರಿಂದ ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರ, ಹಲ್ಲೆ, ಹತ್ಯೆ ಘಟನೆಗಳು ಅಂತ್ಯವಾಗಬಹುದು ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ‘ಪ್ರೊಟೀನ್ ಶೃಂಗಸಭೆಯ ಭವಿಷ್ಯ’ ಕುರಿತ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಂಸಕ್ಕೆ ಪರ್ಯಾಯ ಮೂಲಗಳನ್ನು ಹುಡುಕುವುದು ಅತ್ಯಗತ್ಯವಾಗಿದೆ. ಜನರಿಗೆ ಶುದ್ಧ ಮಾಂಸ ದೊರಕಬೇಕಿದೆ. ಕಸಾಯಿಖಾನೆಗೆ ಹಸುಗಳನ್ನು ಸಾಗಿಸುವವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗುತ್ತಿದೆ. ಇಂತಹ ಹಿಂಸಾಚಾರ ಏಕೆ ನಡೆಯಬೇಕು ಎಂದು ಪ್ರಶ್ನಿಸಿದರು. ಮಾಂಸಕ್ಕಾಗಿ ಪ್ರತೀ ದಿನ 11 ಕೋಟಿಗೂ ಹೆಚ್ಚು ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತಿರುವ ಭಾರತದಲ್ಲಿ ಶುದ್ಧ ಮಾಂಸದ ಪೂರೈಕೆಯನ್ನು ವಿಸ್ತರಿಸುವ ಕಾರ್ಯಸಾಧ್ಯತೆಯ ಬಗ್ಗೆ ಚರ್ಚಿಸಲು ಈ ವಿಚಾರಸಂಕಿರಣ ಆಯೋಜಿಸಲಾಗಿದೆ.

ಪ್ರಾಣಿಗಳ ಜೀವಕೋಶ ಬಳಸಿ ಶುದ್ಧ ಮಾಂಸ ತಯಾರಿಸುವ ‘ಸೆಲ್ಯುಲರ್ ಟೆಕ್ನಾಲಜಿ’ ಅಮೆರಿಕ ಮತ್ತು ಯುರೋಪ್‌ನಲ್ಲಿ ಹೆಚ್ಚು ಪ್ರಚಲಿತವಾಗಿದೆ. ಆದರೆ ಭಾರತದಲ್ಲಿ ಈ ತಂತ್ರಜ್ಞಾನ ಇನ್ನೂ ಆರಂಭಿಕ ಹಂತದಲ್ಲಿದೆ. ಈ ತಂತ್ರಜ್ಞಾನದಲ್ಲಿ ಪ್ರಾಣಿಗಳ ಜೀವಕೋಶ ಬಳಸಿ ಮಾಂಸ ತಯಾರಿಸಲಾಗುತ್ತಿದ್ದು ಈ ಮಾಂಸದಲ್ಲಿ ಮೂಳೆ ಮತ್ತು ಇತರ ಅಂಗಗಳಿರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಜೀವಂತ ಪ್ರಾಣಿಗಳನ್ನು ಬಳಸುವುದಿಲ್ಲ, ಆದ್ದರಿಂದ ವಿಶ್ವಾದ್ಯಂತ ಪ್ರಾಣಿದಯಾ ಸಂಘಟನೆ, ಸಸ್ಯಾಹಾರಿಗಳ ಆತಂಕಕ್ಕೆ ಕಾರಣವಾಗಿರುವ ಪ್ರಾಣಿಹತ್ಯೆಯ ಪ್ರಶ್ನೆಯೇ ಬರುವುದಿಲ್ಲ ಎಂದು ಸಚಿವೆ ಹೇಳಿದರು.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುವಂತಾಗಲು ಸರಕಾರ ಸೆಲ್ಯುಲರ್ ಟೆಕ್ನಾಲಜಿಗೆ ಪ್ರೋತ್ಸಾಹ ನೀಡಬೇಕು. ಶುದ್ಧ ಮಾಂಸ ತಂತ್ರಜ್ಞಾನದಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ದೊರಕುತ್ತದೆ ಎಂದು ಮೇನಕಾ ಗಾಂಧಿ ಹೇಳಿದರು. ಈ ಸಂದರ್ಭ ಮಾತನಾಡಿದ ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ, ಭಾರತದಲ್ಲಿ ಸಿಸಿಎಂಬಿಯಂತಹ ಸಂಸ್ಥೆಗಳು ಈ ತಂತ್ರಜ್ಞಾನವನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ರೂಪಿಸಿದೆ. ಸೆಲ್ಯುಲರ್ ತಂತ್ರಜ್ಞಾನದ ಮೂಲಕ ಜನತೆಗೆ ಬೃಹತ್ ಪ್ರಮಾಣದಲ್ಲಿ ಶುದ್ಧ ಮಾಂಸ ಪೂರೈಸಲು ಸಾಧ್ಯವೇ ಎಂಬ ಕುರಿತು ಅಧ್ಯಯನ ನಡೆಸುವ ನಿಟ್ಟಿನಲ್ಲಿ ‘ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಷನಲ್ ಇಂಡಿಯಾ’ ಹಾಗೂ ‘ಗುಡ್ ಫುಡ್ ಇನ್‌ಸ್ಟಿಟ್ಯೂಟ್’ ಜೊತೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News