ಮಹಾರಾಷ್ಟ್ರ ಸ್ಫೋಟಕ ಪತ್ತೆ ಪ್ರಕರಣ: ಎಟಿಎಸ್‌ನಿಂದ ಮತ್ತೋರ್ವನ ಬಂಧನ

Update: 2018-08-25 15:38 GMT

ಮುಂಬೈ, ಆ. 25: ರಾಜ್ಯದ ಪಾಲ್ಘಾರ್‌ನಿಂದ ಇತ್ತೀಚೆಗೆ ಬೃಹತ್ ಪ್ರಮಾಣದ ಸ್ಫೋಟಕ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಎಟಿಎಸ್ ಇದೇ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಘಾಟ್ಕೋಪರ್‌ನಿಂದ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದೆ.

ಅವಿನಾಶ್ ಪವಾರ್ (30) ರನ್ನು ಮುಂಬೈ ಈಶಾನ್ಯ ಘಾಟ್ಕೋಪರ್‌ನಿಂದ ಶುಕ್ರವಾರ ರಾತ್ರಿ ಬಂಧಿಸಲಾಯಿತು. ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ, ಪುಣೆ, ಸತಾರ ಹಾಗೂ ಸೋಲಾಪುರದಲ್ಲಿ ಸ್ಫೋಟ ನಡೆಸುವ ಉದ್ದೇಶದಿಂದ ಪಾಲ್ಘಾರ್‌ನಲ್ಲಿ ಸಂಗ್ರಹಿಸಿ ಇರಿಸಲಾಗಿದ್ದ ಬಾಂಬ್, ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ಆಗಸ್ಟ್ 10ರಂದು ವಶಪಡಿಸಿಕೊಂಡ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದ ಐದನೇ ಬಂಧನ ಇದಾಗಿದೆ.

ಈ ಪ್ರಕರಣದಲ್ಲಿ ಹಿಂದೆ ಬಂಧಿತರಾಗಿರುವ ವೈಭವ್ ರಾವತ್, ಶರದ್ ಕಲಾಸ್ಕರ್, ಸುಧನ್ವ ಗೊಂಧಾಲೇಕಾರ್ ಹಾಗೂ ಶ್ರೀಕಾಂತ್ ಪಂಗಾರ್ಕರ್ ರಾಜ್ಯದಲ್ಲಿ ಸ್ಫೋಟ ನಡೆಸಲು ರೂಪಿಸಿದ ಸಂಚಿನಲ್ಲಿ ಪವಾರ್ ಭಾಗಿಯಾಗಿದ್ದಾನೆ ಎಂದು ಎಟಿಎಸ್ ತಿಳಿಸಿದೆ. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಪವಾರ್‌ನ ಹೆಸರು ಹೇಳಿದ್ದರು. ಈ ಮಾಹಿತಿಯ ಹಿನ್ನೆಲೆಯಲ್ಲಿ ಅವಿನಾಶ್ ಪವಾರ್‌ನನ್ನು ಬಂಧಿಸಲಾಯಿತು ಎಂದು ಎಟಿಎಸ್ ತಿಳಿಸಿದೆ.

ಆಗಸ್ಟ್ 10ರಂದು ಗೋರಕ್ಷಣೆ ಸಂಘಟನೆ ಎಂದು ಹೇಳಲಾಗುವ ‘ಹಿಂದೂ ಗೋವಂಶ ರಕ್ಷಾ ಸಮಿತಿ’ ನಡೆಸುತ್ತಿರುವ ರಾವತ್ (40)ನನ್ನು ಪಾಲ್ಘಾರ್ ಜಿಲ್ಲೆಯ ನಾಲಾಸೋಪಾರಾದಿಂದ ಎಟಿಎಸ್ ಬಂಧಿಸಿತ್ತು. ರಾವತ್ ಬಂಧನದ ಬಳಿಕ ಪಾಲ್ಘಾರ್ ಹಾಗೂ ಪುಣೆ ಜಿಲ್ಲೆಗಳಲ್ಲಿ ದಾಳಿ ನಡೆಸಿದ ಎಟಿಎಸ್ ಕಲಾಸ್ಕರ್ (25) ಹಾಗೂ ಗೊಂದಲೇಕರ್ (39)ರನ್ನು ವಶಕ್ಕೆ ಪಡೆದುಕೊಂಡಿತ್ತು. ಆಗಸ್ಟ್ 19ರಂದು ಜಲನಾದಿಂದ ಶಿವಸೇನೆಯ ಮಾಜಿ ಕಾರ್ಪೊರೇಟರ್ ಪಂಗಾರ್ಕರ್‌ರನ್ನು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News